ಅಹಮದಾಬಾದ್: ಕರೊನಾ ಕಣ್ಮರೆಯಾಗುತ್ತಿರುವ ಸುಸಂದರ್ಭದಲ್ಲಿಯೂ ಕೆಲ ರಾಜ್ಯಗಳಲ್ಲಿ ಮತ್ತೆ ಮಹಾಮಾರಿ ಕೋವಿಡ್-19 ಪ್ರಕರಣಗಳು ಏರುತ್ತಿರುವ ಕಾರಣ ನಾಳೆಯಿಂದ ರಾತ್ರಿ ಕರ್ಫ್ಯೂ ಹೇರಲಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶ ಹಾಗೂ ಗುಜರಾತಿನ ಕೆಲ ನಗರಗಳಲ್ಲಿ ಕರೊನಾ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವುದರಿಂದ ರಾತ್ರಿ ಕರ್ಫ್ಯೂ ಹೇರಲಾಗಿದೆ. ಗುಜರಾತಿನ ರಾಜ್ಕೋಟ್, ಸೂರತ್ ಮತ್ತು ವಡೋದರಾದಲ್ಲಿ ನಾಳೆಯಿಂದ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೂತನ ನಿಯಮ ಜಾರಿಯಲ್ಲಿರಲಿದೆ ಎಂದು ಡಿಸಿಎಂ ನಿತಿನ್ ಪಟೇಲ್ ತಿಳಿಸಿದ್ದಾರೆ.
ಮಧ್ಯಪ್ರದೇಶದ ಇಂದೋರ್, ಭೋಪಾಲ್, ಗ್ವಾಲಿಯರ್, ವಿಧಿಶಾ ಮತ್ತು ರಾಟ್ಲಮ್ನಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ಅಗತ್ಯ ಸೇವೆ ಮತ್ತು ಕಾರ್ಖಾನೆ ಕೆಲಸಗಾರರಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಅಹಮದಾಬಾದ್ನಲ್ಲಿ ನ. 23ರಂದು ನಿಷೇಧ ಹೇರಿದ ಬೆನಲ್ಲೇ ಉಳಿದ ಕೆಲ ನಗರಗಳಲ್ಲಿಯೂ ಕರ್ಫ್ಯೂ ಹೇರಲಾಗಿದೆ. ಗುಜರಾತಿನಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಈ ನಿರ್ಧಾರವನ್ನು ಸಿಎಂ ವಿಜಯ್ ರೂಪಾಣಿ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಅಹಮದಾಬಾದ್ನಲ್ಲಿ ದಿನವೊಂದಕ್ಕೆ 200ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಒಂದು ತಿಂಗಳ ಮುಂಚೆ 140ಕ್ಕೂ ಕಡಿಮೆ ಕೇಸ್ಗಳು ಬರುತ್ತಿದ್ದವು. ಗುರುವಾರ 230 ಪ್ರಕರಣಗಳು ವರದಿಯಾಗಿವೆ. ಕರ್ಫ್ಯೂ ಹೊರತಾಗಿ ಸೋಮವಾರದಿಂದ ಶಾಲಾ-ಕಾಲೇಜುಗಳನ್ನು ತೆರೆಯಲು ಗುಜರಾತ್ ಸರ್ಕಾರ ನಿರ್ಧಾರ ಮಾಡಿದೆ. (ಏಜೆನ್ಸೀಸ್)