ಸಾಂದರ್ಭಿಕ ಚಿತ್ರ 
ನ್ಯೂಸ್

ದೆಹಲಿಯಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ; ನೈಜೀರಿಯಾ ಮೂಲದ ಮಹಿಳೆ ಸೋಂಕಿಗೆ ತುತ್ತು

ನವ ದೆಹಲಿ: ನೈಜೀರಿಯಾ ಮೂಲದ 30 ವರ್ಷದ ಮಹಿಳೆಯಲ್ಲಿ ಮಂಕಿಪಾಕ್ಸ್​ ಸೋಂಕು ಪತ್ತೆಯಾಗಿದೆ. ಅವರನ್ನು ದೆಹಲಿಯ ಲೋಕ ನಾಯಕ (ಎಲ್​ಎನ್​ಜೆಪಿ) ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ದೆಹಲಿಯಲ್ಲಿ ಮಂಕಿಪಾಕ್ಸ್​​ಗೆ ಒಳಗಾಗಿರುವವ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.

ನೈಜೀರಿಯಾ ಮೂಲದ ಮಹಿಳೆಯಲ್ಲಿ ಸೆ.14ರಂದು ಮಂಕಿಪಾಕ್ಸ್​ ಖಾಯಿಲೆಯ ಗುಣಲಕ್ಷಣವಿರುವುದು ಕಂಡು ಬಂದಿತ್ತು. ಹೀಗಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಯಿತು. ಅವರ ಜೊತೆಗೆ ಸಂಪರ್ಕ ಹೊಂದಿದ್ದ ಇತರರನ್ನೂ ಪರೀಕ್ಷಿಸಲಾಗಿದೆ. ಈವರೆಗೆ ದಾಖಲಾಗಿರುವ 13 ಮಂದಿಯಲ್ಲಿ ಈಗಾಗಲೇ 6 ಜನರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮಂಕಿಪಾಕ್ಸ್​ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಜ್ವರ, ಚರ್ಮದಲ್ಲಿ ಗುಳ್ಳೆಗಳು, ತಲೆನೋವು, ಸ್ನಾಯುಸೆಳೆತ, ಶೀತ, ಕೆಮ್ಮು ಮುಂತಾದ ಸಾಮಾನ್ಯ ಲಕ್ಷಣವನ್ನು ಹೊಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದೆಹಲಿ ಭಾಗದಲ್ಲಿ ಮಂಕಿಪಾಕ್ಸ್​ ಕಾಣಿಸಿಕೊಳ್ಳುತ್ತಿದ್ದು, ಮತ್ತೋರ್ವ ವ್ಯಕ್ತಿಯನ್ನು ದೆಹಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ವರದಿಯಾಗಿದೆ. (ಏಜೆನ್ಸೀಸ್)