ನ್ಯೂಸ್

ಅನಿಶ್ಚಿತತೆಯಲ್ಲಿ ಷೇರುಪೇಟೆ ಸೂಚ್ಯಂಕ: ಸೆನ್ಸೆಕ್ಸ್ ಸ್ಥಿರ..ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ನಿಫ್ಟಿ!

ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಷೇರು ಮಾರುಪೇಟೆಯಲ್ಲಿ ದೇಶೀಯ ಸೂಚ್ಯಂಕ ಅನಿಶ್ಚಿತತೆಯಲ್ಲಿ ಸಾಗುತ್ತಿದೆ. ವಿದೇಶಿ ವಿನಿಮಯದಲ್ಲಿ ಮಿಶ್ರ ಸಂಕೇತಗಳನ್ನು ಸ್ವೀಕರಿಸುತ್ತಿರುವ ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಇದರೊಂದಿಗೆ ದೇಶೀಯ ಸೂಚ್ಯಂಕಗಳು ಸತತ ಎರಡನೇ ದಿನ(ಆ.28)ವೂ ಸ್ಥಿರವಾಗಿ ವಹಿವಾಟು ಅಂತ್ಯಗೊಳಿಸಿದವು.

ಸೆನ್ಸೆಕ್ಸ್ 82 ಸಾವಿರದ ಗಡಿ ದಾಟಿ ಮತ್ತೆ ಕೆಳಗಿಳಿಯಿತು. ನಿಫ್ಟಿ ಸಾರ್ವಕಾಲಿಕ ಎತ್ತರವನ್ನು ಮುಟ್ಟಿದೆ. ಬುಧವಾರ ಮಧ್ಯಾಹ್ನದ ನಂತರ ಮಾರಾಟ ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿಯಿತು.

ಸೆನ್ಸೆಕ್ಸ್ ಮಂಗಳವಾರದ ಮುಕ್ತಾಯಕ್ಕೆ (81,711) ಹೋಲಿಸಿದರೆ ಸುಮಾರು 70 ಅಂಕಗಳ ಗಳಿಕೆಯೊಂದಿಗೆ ಸ್ಥಿರವಾಗಿ ಪ್ರಾರಂಭವಾಯಿತು. ದಿನವಿಡೀ ಲಾಭ ಮತ್ತು ನಷ್ಟದಲ್ಲಿ ವಹಿವಾಟು ನಡೆಸಿತು. ಒಂದು ಹಂತದಲ್ಲಿ ಅದು 300 ಅಂಕಗಳನ್ನು ಗಳಿಸಿ 82,039 ರ ಗರಿಷ್ಠ ಮಟ್ಟವನ್ನು ಮುಟ್ಟಿತು. ಆದರೆ ಮಧ್ಯಾಹ್ನದ ನಂತರ ಮಾರಾಟ ಆರಂಭವಾಗಿದ್ದರಿಂದ ನಷ್ಟಕ್ಕೆ ಜಾರಿದೆ. ಅಂತಿಮವಾಗಿ 73 ಅಂಕಗಳ ಏರಿಕೆಯೊಂದಿಗೆ 81,785ಕ್ಕೆ ದಿನದಾಟವನ್ನು ಅಂತ್ಯಗೊಳಿಸಿತು.

ಮತ್ತೊಂದೆಡೆ ನಿಫ್ಟಿ 25,129 ನಲ್ಲಿ ಗರಿಷ್ಠ ಮಟ್ಟವನ್ನು ತಲುಪಿತು. ಅಂತಿಮವಾಗಿ 34 ಅಂಕಗಳ ಏರಿಕೆಯೊಂದಿಗೆ 25,052ಕ್ಕೆ ಸ್ಥಿರವಾಯಿತು.

ಎಲ್ ಟಿಐ ಮೈಂಡ್ ಟ್ರೀ, ಟ್ರೆಂಟ್, ಗ್ಯಾನುವಲ್ಸ್ ಇಂಡಿಯಾ ಮತ್ತು ಐಇಎಕ್ಸ್ ಷೇರುಗಳು ಸೆನ್ಸೆಕ್ಸ್ ನಲ್ಲಿ ಲಾಭ ಗಳಿಸಿದವು. ಆದಿತ್ಯ ಬಿರ್ಲಾ ಫ್ಯಾಶನ್ಸ್, ಬಂದನ್ ಬ್ಯಾಂಕ್, ಮಾರಿಕೋ ಮತ್ತು ಬರ್ಗರ್ ಪೇಂಟ್ಸ್ ಷೇರುಗಳು ನಷ್ಟವನ್ನು ಅನುಭವಿಸಿದವು.