ಮುಂಬೈ: ದೇಶದ ಷೇರುಪೇಟೆಯಲ್ಲಿ ಸತತ ಎರಡನೇ ದಿನವಾದ ಗುರುವಾರವೂ ಗೂಳಿ ಓಟದಿಂದಾಗಿ ಸೂಚ್ಯಂಕಗಳು ಏರಿಕೆ ಕಂಡವು. ನಿಫ್ಟಿ 7 ತಿಂಗಳ ಬಳಿಕ 25 ಸಾವಿರ ಅಂಕಗಳ ಗಡಿ ದಾಟಿದೆ. ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್ 1,200 ಅಂಕಗಳ ಭರ್ಜರಿ ಜಿಗಿತ ಕಂಡು (1.48%) 82,531 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 395 ಅಂಶಗಳ ಏರಿಕೆಯೊಂದಿಗೆ 25,062ಕ್ಕೆ ತಲುಪಿತು. 2024ರ ಅಕ್ಟೋಬರ್ 17ರ ನಂತರ ನಿಫ್ಟಿ ಇದೇ ಮೊದಲ ಬಾರಿಗೆ 25 ಸಾವಿರದ ಗಡಿ ದಾಟಿತು. ಬಿಎಸ್ಇ ಮಿಡ್ ಕ್ಯಾಪ್ 298 ಅಂಕಗಳ ಜಿಗಿತದೊಂದಿಗೆ (0.67%) 44,626ಕ್ಕೆ ತಲುಪಿತು. ಬಿಎಸ್ಇ ಸ್ಮಾಲ್ ಕ್ಯಾಪ್ 472 ಅಂಕಗಳ ಏರಿಕೆಯೊಂದಿಗೆ (0.94%) 50,450ಕ್ಕೆ ಸ್ಥಿರಗೊಂಡಿತು.
ಸೆನ್ಸೆಕ್ಸ್ನ 30 ಷೇರುಗಳ ಗುಚ್ಛದಲ್ಲಿ 29 ಏರಿಕೆಯೊಂದಿಗೆ ಲಾಭ ಮಾಡಿಕೊಂಡರೆ, ಒಂದು ನಷ್ಟ ಅನುಭವಿಸಿತು. ಟಾಟಾ ಮೋಟರ್ಸ್ 4.16%, ಎಚ್ಸಿಎಲ್ ಟೆಕ್ 3.37%, ಜೊಮ್ಯಾಟೋ 2.2%, ಅದಾನಿ ಪೋರ್ಟ್ಸ್ 2.19% ಮತ್ತು ಏಷಿಯನ್ ಪೇಂಟ್ಸ್ ಕಂಪನಿಯ ಷೇರು 2.07%ರಷ್ಟು ಏರಿಕೆ ದಾಖಲಿಸಿತು. ನಿಫ್ಟಿಯ 50 ಷೇರುಗಳ ಪೈಕಿ 49 ಲಾಭ ಕಂಡರೆ, 1 ನಷ್ಟ ಅನುಭವಿಸಿತು.
ವಿದೇಶಿ ಬಂಡವಾಳದ ಒಳಹರಿವಿನ ಏರಿಕೆ ಮತ್ತು ಸಗಟು ಹಣದುಬ್ಬರ 13 ತಿಂಗಳ ಕನಿಷ್ಠಕ್ಕೆ ಕುಸಿದಿರುವುದರಿಂದ ಷೇರುಪೇಟೆಯಲ್ಲಿನ ಉತ್ಸಾಹಕ್ಕೆ ಕಾರಣವಾಗಿದೆ.