ಬೆಂಗಳೂರು: ನೈಸ್ ಯೋಜನೆ ಹೆಸರಿನಲ್ಲಿ ಅಕ್ರಮವಾಗಿ ಕಬಳಿಸಿರುವ 11,000 ಎಕರೆ ಭೂಮಿಯನ್ನು ರಾಜ್ಯ ಸರಕಾರ ವಾಪಸ್ ಪಡೆದು ರೈತರಿಗೆ ಕೊಡಬೇಕು. ಇಲ್ಲವಾದರೆ ಪಶ್ಚಿಮ ಬಂಗಾಳದಲ್ಲಿ ನಡೆದ ಸಿಂಗೂರು ಮಾದರಿ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಶಾಸಕರ ಭವನದಲ್ಲಿ ನೈಸ್ ಸಂತ್ರಸ್ತ ರೈತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ್ಯ ರೈತರ ಸಂಘ ಹಮ್ಮಿಕೊಂಡಿದ್ದ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನೈಸ್ ಭೂಮಿ ಕಳೆದುಕೊಂಡಿರುವ ರೈತರು ನಡೆಸುತ್ತಿರುವ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಹೋರಾಟ ಪಕ್ಷಾತೀತ, ರಾಜಕೀಯಕ್ಕೆ ಅತೀತವಾಗಿ ನಡೆಯಬೇಕು. ಸರ್ಕಾರ ಭೂಮಿಯನ್ನು ವಾಪಸ್ ಕೊಡದಿದ್ದರೆ ಸಿಂಗೂರು ಮಾದರಿ ಹೋರಾಟ ಆರಂಭ ಮಾಡೋಣ ಎಂದು ಹೇಳಿದರು.
ನೈಸ್ ವಶದಲ್ಲಿರುವ ಹೆಚ್ಚುವರಿ ಭೂಮಿಯನ್ನು ವಾಪಸ್ ಪಡೆಯಲು ಕಾನೂನಿನ ತೊಡಕಿಲ್ಲ. ಸರ್ಕಾರ ಇಡೀ ಯೋಜನೆಯನ್ನು ವಾಪಸ್ ಪಡೆಯುವುದಕ್ಕೆ ನ್ಯಾಯಾಲಯದ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ. ನೈಸ್ ಕಂಪನಿ ಸರ್ಕಾರ ವಿರುದ್ಧ ಹಾಕಿದ್ದ ಎಲ್ಲ ನಿಂದನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆ ಕಂಪನಿ ಮಾಡಿರುವ ಅಕ್ರಮಗಳು ಏನು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿ ಸದನ ಸಮಿತಿ ವರದಿ ಹಿನ್ನೆಲೆಯಲ್ಲಿ ಯೋಜನೆಯನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯ ಮಾಡಿದರು.
2006ರಲ್ಲಿಯೇ ನಾನು ನೈಸ್ ಯೋಜನೆಯನ್ನು ರದ್ದು ಮಾಡಿ ಸರ್ಕಾರದ ವಶಕ್ಕೆ ಪಡೆಯಲು ಹೊರಟಿದ್ದೆ. ಆಗ ಆಗಲಿಲ್ಲ, ಮತ್ತೆ ಸಿಎಂ ಅದಾಗಲೂ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಲು ಸದನದಲ್ಲಿ ವಿಧೇಯಕ ತರಲು ಹೊರಟೆ. ಎರಡೂ ಬಾರಿಯೂ ನಾನು ಯಶಸ್ವಿ ಆಗಲಿಲ್ಲ. ಮೈತ್ರಿ ಸರ್ಕಾರ ಇದ್ದ ಕಾರಣ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನೈಸ್ ಯೋಜನೆ ದೇವೇಗೌಡರ ಪಾಪದ ಕೂಸಲ್ಲ. ಮೂಲ ಒಪ್ಪಂದವನ್ನು ಸಂಪೂರ್ಣವಾಗಿ ತಿರುಚಲಾಗುತ್ತದೆ. ಅಧಿಕಾರಿಗಳು, ರಾಜಕಾರಣಿಗಳನ್ನು ಬುಕ್ ಮಾಡಿಕೊಂಡು ಇಡೀ ಯೋಜನೆಯನ್ನು ಹಾಳು ಮಾಡಿದರು. ಒಪ್ಪಂದ ಹಾಗೂ ಹೈಕೋರ್ಟ್ ಆದೇಶಗಳನ್ನು ನೈಸ್ ಕಂಪನಿ ಉಲ್ಲಂಘನೆ ಮಾಡಿದೆ ಎಂದು ಮಾಹಿತಿ ನೀಡಿದರು.
ಟಿ.ಬಿ.ಜಯಚಂದ್ರ ಅವರು ನೇತೃತ್ವದ ಸದನ ಸಮಿತಿ ವರದಿಯನ್ನು ಉಲ್ಲೇಖ ಮಾಡಿದ ಕುಮಾರಸ್ವಾಮಿ, ಬೆಂಗಳೂರು-ಮೈಸೂರು ನಡುವೆ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ನಿರ್ಮಾಣ ಮಾಡಿವೆ. ನೈಸ್ ಕಂಪನಿ ನಿರ್ಮಾಣ ಮಾಡಿರುವುದು ಪೆರಿಪೆರಲ್ ರಸ್ತೆ, ಲಿಂಕ್ ರಸ್ತೆ ಬಿಟ್ಟರೆ ಬೇರೆ ಮಾಡಿಲ್ಲ. ಹೀಗಾಗಿ ನಮಗೆ ಈ ಯೋಜನೆ ಬೇಕಿಲ್ಲ. ಯೋಜನೆಯನ್ನು ಕಾರ್ಯಗತ ಮಾಡದ ಮೇಲೆ ಆ ಕಂಪನಿಗೆ ಭೂಮಿ ಯಾಕೆ ಕೊಡಬೇಕು? ಭೂಮಿ. ಇಟ್ಟುಕೊಂಡು ಆ ಕಂಪನಿ ರಿಯಲ್ ಎಸ್ಟೇಟ್ ದಂಧೆ ಮಾಡುತ್ತದೆ ಅಷ್ಟೇ ಎಂದು ಕುಮಾರಸ್ವಾಮಿ ತಿಳಿಸಿದರು.