ನ್ಯೂಸ್

NIA raids in 6 states

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಅಲ್-ಖೈದಾ ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದ ಬಾಂಗ್ಲಾ ಪ್ರಜೆಗಳ ಬಂಧನ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದೆ.

ಸೋಮವಾರ ಬೆಳ್ಳಂಬೆಳಗ್ಗೆ ಕರ್ನಾಟಕ, ಜಮ್ಮು-ಕಾಶ್ಮೀರ, ಪಶ್ಚಿಮ ಬಂಗಾಳ, ಬಿಹಾರ, ತ್ರಿಪುರ ಮತ್ತು ಅಸ್ಸಾಂನಲ್ಲಿನ 9 ಕಡೆಗಲ್ಲಿ ಎನ್‌ಐಎ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಅಲ್-ಖೈದಾ ಚಟುವಟಿಕೆಗೆ ಬೆಂಬಲ ಮತ್ತು ದೇಣಿಗೆ ಸಂಗ್ರಹ ಮತ್ತು ಪೂರೈಕೆಯಲ್ಲಿ ತೊಡಗಿದ್ದ ಶಂಕಿತ ವ್ಯಕ್ತಿಗಳ ಮನೆ ಮತ್ತು ಅಡಗುತಾಣಗಳ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ಯಾಂಕಿಂಗ್ ವಹಿವಾಟು, ಮೊಬೈಲ್ ಸೇರಿ ಡಿಜಿಟಲ್ ಸಾಧನಗಳು ಮತ್ತು ಉಗ್ರರ ದೇಣಿಗೆ ಸಂಗ್ರಹದ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಬಾಂಗ್ಲಾದೇಶ ಮೂಲದ ಶಂಕಿತರು ಅಲ್-ಖೈದಾ ಉಗ್ರ ಸಂಘಟನೆಯ ನೆಟ್‌ವರ್ಕ್‌ನಲ್ಲಿ ಇರುವುದು ಮತ್ತು ಸಹಾನುಭೂತಿ ಹೊಂದಿದ್ದರು ಎಂಬುದು ಎನ್‌ಐಎ ತನಿಖೆ ಬೆಳಕಿಗೆ ಬಂದಿದೆ.

ಬಾಂಗ್ಲಾದೇಶ ಮೂಲದ ಅಲ್-ಖೈದಾ ಕಾರ್ಯಕರ್ತರು ನಡೆಸಿದ ಪಿತೂರಿಗೆ ಸಂಬಂಧ 2023ರಲ್ಲಿ ಪ್ರಕರಣ ದಾಖಲಿಸಿಕೊಂಡು ಎನ್‌ಐಎ ತನಿಖೆ ನಡೆಸಿತ್ತು. ಅಲ್-ಖೈದಾ ಚಟುವಟಿಕೆ ವಿಸ್ತರಣೆ ಮತ್ತು ಯುವಕರ ನೇಮಕ ಮಾಡುವುದು ಪ್ರಮುಖವಾಗಿತ್ತು.

ಈ ಕೃತ್ಯದಲ್ಲಿ ತೊಡಗಿದ್ದ ಮೊಹಮ್ಮದ್ ಎಂಬಾತನ್ನು ಬಂಧಿಸಲಾಗಿದೆ. ಬಾಂಗ್ಲಾ ಪ್ರಜೆಗಳು ಸೇರಿ ಐವರ ವಿರುದ್ಧ ಚಾರ್ಜ್‌ಶೀರ್ಟ್ ಸಲ್ಲಿಸಿತ್ತು. ಸೋಜಿಬ್ಮಿಯಾನ್, ಮುನ್ನಾ ಖಾಲಿದ್ ಅನ್ಸಾರಿ ಮುನ್ನಾ ಖಾನ್, ಅಜರುಲ್ ಇಸ್ಲಾಂ ಜಹಾಂಗೀರ್ ಅಥವಾ ಆಕಾಶ್ ಖಾನ್, ಅಬ್ದುಲ್ ಲತೀಫ್ ಮೊಮಿನುಲ್ ಅನ್ಸಾರಿ. ನಕಲಿ ದಾಖಲೆ ಬಳಸಿ ಉಗ್ರ ಚಟುವಟಿಕೆಯಲ್ಲಿ ಶಂಕಿತರು ತೊಡಗಿದ್ದರು. ಮುಸ್ಲಿಂ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸುವುದು ಮತ್ತು ಪ್ರೇರೇಪಿಸುವುದರಲ್ಲಿ ಸಕ್ರಿಯರಾಗಿದ್ದರು. ಅಲ್-ಖೈದಾದ ಹಿಂಸಾತ್ಮಕ ಸಿದ್ಧಾಂತ ಹರಡಿದರು, ನಿಧಿಯನ್ನು ಸಂಗ್ರಹಿಸಿದರು ಮತ್ತು ಈ ಹಣವನ್ನು ಅಲ್-ಖೈದಾಗೆ ವರ್ಗಾಯಿಸುವುದರಲ್ಲಿ ತೊಡಗಿದ್ದರು ಎಂದು ಎನ್‌ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.