ನ್ಯೂಸ್

ಸುಹಾಸ್​ ಶೆಟ್ಟಿ ಹತ್ಯೆ ಕೇಸ್​ NIA ಹೆಗಲಿಗೆ! ತನಿಖೆ ಚುರುಕು

Murder Case: ಮೇ.1ರಂದು ಮಂಗಳೂರಿನಲ್ಲಿ ದುಷ್ಕರ್ಮಿಗಳ ಗುಂಪಿನ ದಾಳಿಗೆ ಭೀಕರವಾಗಿ ಹತ್ಯೆಯಾದ ಹಿಂದೂಪರ ಕಾರ್ಯಕರ್ತ ಎನ್ನಲಾದ ಸುಹಾಸ್​ ಶೆಟ್ಟಿ ಹತ್ಯೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಕಿಡಿಗೇಡಿಗಳ ಗ್ಯಾಂಗ್​ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಪ್ರಕರಣವನ್ನು ಇದೀಗ ಗೃಹಸಚಿವಾಲಯ ತನಿಖಾ ಸಂಸ್ಥೆಯಾದ ಎನ್​ಐಎಗೆ ( NIA) ಹಸ್ತಾಂತರಿಸಿದೆ.

ಕೊಲೆ ಪ್ರಕರಣ

2022ರಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರವಾಗಿ ಸುರತ್ಕಲ್‌ನಲ್ಲಿ ಫಾಜಿಲ್ ಕೊಲೆ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿಯನ್ನು ಗುರುವಾರ (ಮೇ.01) ರಾತ್ರಿ 8.27ರ ಸುಮಾರಿಗೆ ಮಂಗಳೂರಿನ ಹೊರವಲಯದ ಬಜ್ಪೆ ಠಾಣೆ ವ್ಯಾಪ್ತಿಯ ಕಿನ್ನಿಪದವು ಪ್ರದೇಶದಲ್ಲಿ ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದರು. ಈ ಕೊಲೆ ನಡೆದ ಮರುದಿನವೇ ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್​ ಮಾಡಲಾಗಿತ್ತು.

ಅಂದು 8 ಆರೋಪಿಗಳು ಅರೆಸ್ಟ್

ಸುಹಾಸ್ ಶೆಟ್ಟಿ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 8 ಆರೋಪಿಗಳನ್ನು ಬಂಧಿಸಿದ್ದರು. 5 ತಂಡಗಳನ್ನು ರಚಿಸಿ ಆರೋಪಿಗಳ ಸೆರೆಗೆ ಬಲೆ ಬೀಸಿದ್ದ ಖಾಕಿ ಪಡೆ, 8 ಶಂಕಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಬಂಧಿತರನ್ನು ಅಬ್ದುಲ್ ಸಫ್ವಾನ್ (ಪ್ರಮುಖ ಆರೋಪಿ), ನಿಯಾಜ್, ಎಂಡಿ ಮುಜಾಮಿಲ್, ಕಲಂದರ್ ಶಫಿ, ಆದಿಲ್ ಮೆಹರೂಫ್, ನಾಗರಾಜ್, ಎಂಡಿ ರಿಜ್ವಾನ್ ಹಾಗೂ ರಂಜಿತ್ ಎಂದು ಗುರುತಿಸಲಾಗಿದೆ.