ನ್ಯೂಸ್

ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನ ಸೆರೆ ಹಿಡಿದ ಎನ್‌ಐಎ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪರಾರಿಯಾಗಲು ಮುಂದಾಗಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಭಾರತ, ಪಾಕಿಸ್ತಾನ ಹಾಗೂ ಮುಸ್ಲಿಂ ರಾಷ್ಟ್ರಗಳ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತಿದ್ದ ತಮಿಳುನಾಡು ಮೂಲದ ಹಿಜ್ಬ್-ಉತ್-ಥಹ್ರೀರ್(ಎಚ್‌ಯುಟಿ) ಸಂಘಟನೆ ಪ್ರಮುಖ ಆಯೋಜಕ ಹಾಗೂ ಸಂಚುಕೋರನನ್ನು ಎನ್‌ಐಎ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬಂಧಿಸಿದ್ದಾರೆ.
ಅಜೀಜ್ ಅಹ್ಮದ್ ಅಲಿಯಾಸ್ ಜಲೀಲ್ ಅಜೀಜ್ ಅಹ್ಮದ್ ಬಂಧಿತ ಶಂಕಿತ. ಆರೋಪಿ ಬೆಂಗಳೂರು ವಿಮಾನ ನಿಲ್ದಾಣದಿಂದ ಸೌಧಿ ಅರೇಬಿಯಾ ಮಾರ್ಗವಾಗಿ ಯುನಿಟೆಡ್ ಕಿಂಗ್‌ಡಮ್‌ನ ಬರ್ಮಿಂಗ್ ಹ್ಯಾಮ್‌ಗೆ ಪರಾರಿಯಾಗಲು ಮುಂದಾಗಿದ್ದ. ಅಷ್ಟರಲ್ಲಿ ಚೆನ್ನೈ ಕ್ಯೂಬ್ರಾೃಂಚ್ ಮತ್ತು ಎನ್‌ಐಎ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
೬ ಮಂದಿ ವಿರುದ್ಧ ಪ್ರಕರಣ ದಾಖಲು:
ಅಂತಾರಾಷ್ಟ್ರೀಯ ಉಗ್ರಗಾಮಿ ಮತ್ತು ಮೂಲಭೂತ ಸಿದ್ದಾಂತದಿಂದ ಪ್ರಭಾವಿತರಾಗಿದ್ದ ಶಂಕಿತ ಅಜೀಜ್ ಅಹ್ಮದ್ ಸೇರಿ ೬ ಮಂದಿ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು. ಶಂಕಿತರು ಹಿಜ್ಬ್ -ಉತ್-ಥಹ್ರೀನ್ ಸಂಸ್ಥಾಪಕ, ಟ್ರರ್ಕಿ ದೇಶದ ತಾಕಿ ಅಲ್-ದಿನ್ ಅಲ್-ನಭಾನಿ ರಚಿಸಿದ್ದ ಸಂವಿಧಾನವನ್ನು ಭಾರತದಲ್ಲಿ ಜಾರಿಗೊಳಿಸುವ ಕುರಿತು ಯುವಕರ ಸಂಘಟನೆ ಮಾಡುತ್ತಿದ್ದರು. ಮುಸ್ಲಿಂ ಸಮುದಾಯದ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತಿದ್ದರು. ಜತೆಗೆ ತಮ್ಮ ಗುರಿ ಸಾಧಿಸಲು ಭಾರತದ ವಿರುದ್ಧದ ಕೆಲ ಸಂಘಟನೆಗಳಿಂದ ಮಿಲಿಟರಿ ಸಹಾಯ ಪಡೆಯುತ್ತಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ.