ನ್ಯೂಸ್

ಮೃತ್ಯುಕೂಪವಾದ ಎನ್‌ಎಚ್ 209: ತೆವಳಲೂ ಸಾಧ್ಯವಾಗದ ಕಾಮಗಾರಿ ವಾಹನ ಸವಾರರಿಗೆ ಜೀವ ಭಯ

Ramanagara

ರಾಮನಗರ : ಪ್ರಯಾಣಿಕರ ಅನುಕೂಲಕ್ಕಾಗಿ 4 ಪಥದ ರಸ್ತೆಯಾಗಿ ಮೇಲ್ದರ್ಜೆಗೆ ಏರಬೇಕಿದ್ದ ಬೆಂಗಳೂರು- ಚಾಮರಾಜನಗರ- ದಿಂಡಿಗಲ್ ನಡುವಿನ ರಾಷ್ಟ್ರೀಯ ಹೆದ್ದಾರಿ 209 ಕಾಮಗಾರಿಗೆ ಗ್ರಹಣ ಹಿಡಿದಿದೆ. ಅರೆಬರೆ ಕೆಲಸ ದಿಂದಾಗಿ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.

ಸುಮಾರು 3-4 ವರ್ಷಗಳ ಹಿಂದೆ ಆರಂಭಗೊಂಡ ಎನ್‌ಎಚ್ 209ರ ರಸ್ತೆ ವಿಸ್ತರಣೆ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದ್ದು, ಇದರಿಂದಾಗಿ ಪ್ರತಿದಿನ ಈ ರಸ್ತೆಯಲ್ಲಿ ಪ್ರಯಾಣಿಸುವವರು ತೊಂದರೆಗೆ ಒಳಗಾಗಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ತೆರಳಲು ಹಾಗೂ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವ ಎನ್‌ಎಚ್ 209ನಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ವಿಸ್ತರಣೆ ಮಾಡಲು 6 ವರ್ಷಗಳ ಹಿಂದೆ ಯೋಜನೆ ರೂಪಿಸಲಾಗಿತ್ತು. ಆರಂಭದಲ್ಲಿ ಕಾಮಗಾರಿ ಚುರುಕಾಗಿ ಸಾಗಿದರೂ ನಂತರ ಯೋಜನೆ ಸಂಪೂರ್ಣವಾಗಿ ನಲುಗಿದ್ದು, ಪ್ರಯಾಣಿಕರು ಇದರ ನೋವು ಅನುಭವಿಸುವಂತೆ ಆಗಿದೆ.

ವಾಹನ ದಟ್ಟಣೆ ಹೆಚ್ಚು: ಬೆಂಗಳೂರಿನಿಂದ ಬನಶಂಕರಿ ಮಾರ್ಗವಾಗಿ ಕನಕಪುರ, ಮಳವಳ್ಳಿ, ಮೈಸೂರು, ಚಾಮರಾಜನಗರ ಹಾಗೂ ತಮಿಳುನಾಡಿನ ಕೊಯಮತ್ತೂರು, ದಿಂಡಿಗಲ್ ಹಾಗೂ ಕೇರಳ ರಾಜ್ಯದ ಸುಲ್ತಾನ್ ಬತೇರಿ, ಕೊಯಿಕೋಡ್‌ಗಳಿಗೆ ತೆರಳಲು ಇದೇ ಮಾರ್ಗ ಬಳಕೆ ಮಾಡಲಾಗುತ್ತದೆ.

ಅಲ್ಲದೆ, ರಜಾ ದಿನಗಳಲ್ಲಿ ಸಂಗಮ, ಮೇಕೆದಾಟು, ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ ಮುಂತಾದ ಪ್ರದೇಶಗಳಿಗೆ ತೆರಳಲೂ ಪ್ರವಾಸಿಗರು ಇದೇ ರಸ್ತೆ ಬಳಸುತ್ತಾರೆ. ಹೀಗಾಗಿ ಸಂಚಾರ ದಟ್ಟಣೆ ಹೆಚ್ಚಾಗೇ ಇರುತ್ತದೆ. ಇದೀಗ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಸ್ಥಳೀಯರೂ ರಸ್ತೆ ದಾಟಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪದೇಪದೆ ಅಪಘಾತಗಳು ಸಂಭವಿಸುತ್ತಿದ್ದು, ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಉತ್ತರ ನೀಡಬೇಕಿದೆ.

ಯೋಜನೆ ವಿವರ: ಬೆಂಗಳೂರಿನಿಂದ ತಮಿಳುನಾಡಿನ ದಿಂಡಿಗಲ್‌ವರೆಗೆ ಸಂಪರ್ಕ ಕಲ್ಪಿಸುವ ಎನ್‌ಎಚ್ 209ರ ರಸ್ತೆ ವಿಸ್ತರಣೆ ಕಾಮಗಾರಿಯನ್ನು ರಾಜ್ಯ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಉದ್ದ 167 ಕಿಮೀ ಆಗಿದ್ದು, ಯೋಜನಾ ವೆಚ್ಚ ಒಟ್ಟು 1,961 ಕೋಟಿ ರೂ.ಗಳು. ಇದರಲ್ಲಿ ಕಾಮಗಾರಿಗೆ 1008 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರೆ, ಭೂ ಸ್ವಾಧೀನಕ್ಕಾಗಿ 954 ಕೋಟಿ ರೂ.ಗಳನ್ನು ನೀಡಲಾಗಿದೆ.

ಇದರಲ್ಲಿ ಬೆಂಗಳೂರಿನಂದ ಕನಕಪುರವರೆಗೆ ಒಟ್ಟು 33 ಕಿ.ಮೀ ಉದ್ದದ ರಸ್ತೆ 4 ಪಥದಲ್ಲಿ ನಿರ್ಮಾಣವಾಗುತಲಿದ್ದು, ತಮಿಳುನಾಡು ಗಡಿವರೆಗೆ 137 ಕಿ.ಮೀ. ಉದ್ದ ಮತ್ತಷ್ಟು ವಿಸ್ತರಣೆಗೊಂಡ 2 ಪಥದ ರಸ್ತೆ ಆಗಲಿದೆ.ಹೆದ್ದಾರಿಯಲ್ಲಿ ಹಾದು ಹೋಗುವ ಪಟ್ಟಣಗಳಾದ ರಾಮನಗರ ಜಿಲ್ಲೆಯ ಹಾರೋಹಳ್ಳಿ, ಕನಕಪುರ, ಸಾತನೂರು, ಮಂಡ್ಯ ಜಿಲ್ಲೆ ಹಲಗೂರು, ಚಾಮರಾಜ ನಗರ ಜಿಲ್ಲೆ ಕೊಳ್ಳೆಗಾಲ, ಸತ್ತೇಗಾಲ ಮತ್ತು ಚಾಮರಾಜನಗರದಲ್ಲಿ ಬೈಪಾಸ್ ನಿರ್ಮಾಣವಾಗಲಿದೆ.

ಜನರ ಆಕ್ರೋಶ : ರಾಷ್ಟ್ರೀಯ ಹೆದ್ದಾರಿ 209ರ ವಿಸ್ತರಣೆ ಗುತ್ತಿಗೆ ಪಡೆದ ಸಂಸ್ಥೆಯ ಮಾಲೀಕರು ಮೃತಪಟ್ಟ ಹಿನ್ನೆಲೆಯಲ್ಲಿ ಉಂಟಾದ ಕುಟುಂಬ ಕಲಹವೇ ಕಾಮಗಾರಿ ವಿಳಂಬಕ್ಕೆ ಕಾರಣ ಎನ್ನುವುದು ಎನ್‌ಎಚ್‌ಎಐ ಅಧಿಕಾರಿಗಳ ಮಾತಾಗಿದೆ. ಆದರೆ ಕೇವಲ 2 ವರ್ಷಗಳಲ್ಲಿ ಮುಗಿಯಬೇಕಾದ ಕಾಮಗಾರಿ 4 ವರ್ಷಗಳಾದರೂ ತೆವಳುತ್ತಿದ್ದು, ಶಕ್ತಿ ತುಂಬುವ ಕೆಲಸವನ್ನು ಅಧಿಕಾರಿಗಳು ಮಾಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಯಾಣಿಕರ ಪಾಲಿಗೆ ಈ ರಸ್ತೆ ಮೃತ್ಯುಕೂಪವಾಗಿದೆ. ಕಾಮಗಾರಿ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದ್ದು, ಶೀಘ್ರ ಪೂರ್ಣಗೊಳಿಸಲು ಈಗಾಗಲೇ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಮನವಿ ಮಾಡಿದ್ದೇವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅವರಿಂದ ಸಮಂಜಸ ಉತ್ತರ ಬರುತ್ತಿಲ್ಲ. ಎಚ್.ಎಸ್.ಮುರಳೀಧರ್ ಅಧ್ಯಕ್ಷ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ, ಹಾರೋಹಳ್ಳಿ ಗುತ್ತಿಗೆದಾರರಿಗೆ ಆರ್ಥಿಕ ಸಮಸ್ಯೆ ಆಗಿತ್ತು, ಆದರೆ ಈಗಾಗಲೇ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದೆ. ಇನ್ನೊಂದು ವಾರದಲ್ಲಿ ಕಾಮಗಾರಿ ವೇಗ ಪಡೆಯಲಿದೆ. ಶ್ರೀಧರ್ ಯೋಜನಾ ನಿರ್ದೇಶಕರು, ಎನ್.ಎಚ್.209 ರಸ್ತೆಯಲ್ಲಿ ಓಡಾಡುವುದೂ ಕಷ್ಟ. ಕಾಮಗಾರಿಗಾಗಿ ಅಗೆದಿರುವುದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣ ಹೋಗುತ್ತದೆ. ವಾಹನದ ದಟ್ಟಣೆಯೂ ಹೆಚ್ಚಿದ್ದು, ರಸ್ತೆಯಲ್ಲಿ ಓಡಾಟ ಕಷ್ಟವಾಗಿದೆ. ಶ್ರೀನಿವಾಸ್ ಸ್ಥಳೀಯರು