ಬೆಂಗಳೂರು: ಅದಾನಿ ಪವರ್ ಲಿಮಿಟೆಡ್ ಜತೆಗೆ ವಿಲೀನಗೊಂಡಿರುವ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಯುಪಿಸಿಎಲ್) ನಿಯಮ ಹಾಗೂ ಪರವಾನಿಗೆಗಳನ್ನು ಉಲ್ಲಂಘಿಸಿ ಉಡುಪಿ ಜಿಲ್ಲೆಯಲ್ಲಿ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ಮಾಡಿರುವ ಹಾನಿಗೆ ಪರಿಹಾರವಾಗಿ ರಾಷ್ಟ್ರೀಯ ಹಸಿರು ನ್ಯಾಯಾಧೀಕಾರಣ (ಎನ್‌ಜಿಟಿ) ಚೆನ್ನೈ ಪ್ರಾದೇಶಿಕ ಪೀಠದ ಆದೇಶದಂತೆ 47.02 ಕೋಟಿ ರೂ.ಗಳನ್ನು ವಸೂಲಿ ಮಾಡಲು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ವಿಚಾರವಾಗಿ ವಕೀಲ ಎಸ್. ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಈ ವಿಚಾರ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದೆ. ಅರ್ಜಿದಾರರು ಪ್ರಸ್ತಾಪಿಸಿರುವ ವಿಷಯಗಳು ಗಂಭೀರವಾಗಿರಬಹುದು. ಆದರೆ, ಹಸಿರು ನ್ಯಾಯಾಧೀಕರಣದ ಆದೇಶ ಪಾಲಿಸಲು ನಿರ್ದೇಶನ ನೀಡುವಂತೆ ಕೋರಿದ ಮನವಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಡಿ ಪರಿಗಣಿಸಲು ಬರುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
ಹಸಿರು ನ್ಯಾಯಾಧೀಕರಣದ ಆದೇಶ ನೀಡಿ ಮೂರು ವರ್ಷ ಕಳೆದರೂ ಪಾಲನೆ ಆಗಿಲ್ಲ. ಗ್ರಾಮಸ್ಥರು ಸಂಕಷ್ಟದಲ್ಲಿ. ಸುಪ್ರೀಂಕೋರ್ಟ್ ಪ್ರಕರಣ ಸಹ ಮುಂದುವರಿಯುತ್ತಿಲ್ಲ. ಸರ್ಕಾರ ಹಾಗೂ ಇತರ ಪ್ರಾಧಿಕಾರಗಳು ಮೌನವಹಿಸಿವೆ. ಜಂಟಿ ಸಮಿತಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಸ್ಥಳೀಯ ಬಡ ರೈತರ ಪರವಾಗಿ ಹೈಕೋರ್ಟ್ ಮೊರೆ ಹೋಗಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.