ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ
Mental Health Awareness -
ವೇಗದ ಮತ್ತು ಸ್ಪರ್ಧಾತ್ಮಕ ಜೀವನದಲ್ಲಿ ಮಾನಸಿಕ ಒತ್ತಡ ದೊಡ್ಡವರನ್ನಷ್ಟೇ ಅಲ್ಲ, ಚಿಕ್ಕ ಮಕ್ಕಳನ್ನೂ ಕಾಡುತ್ತಿದೆ. ಪರೀಕ್ಷೆ ಭಯ, ಫಲಿತಾಂಶದ ಆತಂಕ, ಶಾಲೆ- ಕಾಲೇಜುಗಳಲ್ಲಿ ಮತ್ತು ಮನೆಗಳಲ್ಲಿ ಓದುವ ಒತ್ತಡಗಳ ನಡುವೆ ಮಕ್ಕಳು ಬಡವಾಗುತ್ತಿದ್ದಾರೆ. ಜತೆಗೆ 4-5ನೇ ತರಗತಿ ಮಕ್ಕಳೂ ಆತ್ಮಹತ್ಯೆಯಂತಹ ನಿರ್ಧಾರ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿಯೇ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಹಾಗೂ ಸಮುದಾಯ ಮಾನಸಿಕ ಆರೋಗ್ಯವನ್ನು ಉತ್ತೇಜಿಸುವ ಅಗತ್ಯವನ್ನು ಗುರುತಿಸಿ, ತಂತ್ರಜ್ಞಾನ ಸಂಸ್ಥೆ ಟೆಕಿಯಾನ್ ಮತ್ತು ಸರ್ಕಾರೇತರ ಸಂಸ್ಥೆಯಾದ ‘ಮೈಂಡ್ ಅಂಡ್ ಮ್ಯಾಟರ್ ಜೊತೆಗೆ ಸಹಭಾಗಿತ್ವ ಮಾಡಿಕೊಂಡಿದ್ದು, ಈ ವರ್ಷ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಉದ್ದೇಶ ಹೊಂದಿದೆ. “ತನ್ನದೇ ಆದ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮ ‘ಟೆಕಿಯಾನ್ ಫಾರ್ ಗುಡ್’ ಅಡಿಯಲ್ಲಿ ಈ ಸಹಭಾಗಿತ್ವವು ಮಾನಸಿಕ ಆರೋಗ್ಯದ ಬಗ್ಗೆ ಇರುವ ಕಳಂಕವನ್ನು ದೂರ ಮಾಡುವ ಉದ್ದೇಶದೊಂದಿಗೆ, ನಗರ ಹಾಗೂ ಗ್ರಾಮೀಣ ಪ್ರದೇಶಗಳ ಹಿಂದುಳಿದ ಸಮುದಾಯಗಳಿಗೆ ಉನ್ನತ ಗುಣಮಟ್ಟದ ಮಾನಸಿಕ ಆರೋಗ್ಯ ಸಂಪನ್ಮೂಲಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಲಿದೆ. “ಮಾನಸಿಕ ಆರೋಗ್ಯವನ್ನು ನಮ್ಮ ಸಮಾಜದ ಅವಿಭಾಜ್ಯ ಭಾಗವಾಗಿ ಸಾಮಾನ್ಯವಾಗಿ ಸ್ವೀಕರಿಸುವುದು ಅಗತ್ಯ,” ಎಂದು ಮೈಂಡ್ ಅಂಡ್ ಮ್ಯಾಟರ್ ಸಂಸ್ಥಾಪಕಿ ದೀಪಿಕಾ ಅಪ್ಪಯ್ಯ ಹೇಳಿದರು.
ಈ ಕಾರ್ಯಕ್ರಮವು ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿರುವ ಮಕ್ಕಳು (9 ವರ್ಷ ಮೇಲ್ಪಟ್ಟ), ಹದಿಹರೆಯದವರು, ಪೋಷಕರು ಮತ್ತು ಶಿಕ್ಷಕರ ಮೇಲೆ ಕೇಂದ್ರೀಕರಿಸುತ್ತದೆ. ಈ ಕಾರ್ಯಕ್ರಮದ ಪ್ರಮುಖ ವೈಶಿಷ್ಟ್ಯವೆಂದರೆ ಅದರ ಸ್ಥಳೀಯ ಭಾಷಾ ವಿಧಾನ, ಪ್ರಾದೇಶಿಕ ಭಾಷೆಗಳಲ್ಲಿ ಚಟುವಟಿಕೆ ಆಧಾರಿತ ಮತ್ತು ಮಾನಸಿಕ ಆರೋಗ್ಯ ಸಾಧನಗಳನ್ನು ಒದಗಿಸುವ ಮೂಲಕ ಭಾಷಾ ಅಡೆತಡೆಯಿಂದ ಯಾರೂ ಹಿಂದೆ ಬಿದ್ದಂತಾಗದಂತೆ ನೋಡಿಕೊಳ್ಳುತ್ತದೆ. ಪಠ್ಯಕ್ರಮವು ಶಾಲೆಗಳಲ್ಲಿ ಸುರಕ್ಷಿತ ಸ್ಥಳಗಳು ಮತ್ತು ಸಹಾನುಭೂತಿಯ ಬೆಂಬಲ ವ್ಯವಸ್ಥೆಗಳನ್ನು ಬೆಳೆಸಲು ತರಬೇತಿ ಪಡೆದ ಸ್ವಯಂಸೇವಕರು ನಿಮ್ಹಾನ್ಸ್ ಅಭಿವೃದ್ಧಿಪಡಿಸಿದ ವಿಶೇಷ ಮಾದರಿಗಳನ್ನು ಬಳಸಿಕೊಳ್ಳುತ್ತದೆ.
"ಮಾನಸಿಕ ಆರೋಗ್ಯವನ್ನು ಸಾಮಾನ್ಯವಾಗಿ ನಗರ ಮತ್ತು ಉನ್ನತ ವರ್ಗದ ದೃಷ್ಟಿಕೋನದಿಂದ ನೋಡಲಾಗುತ್ತದೆ, ಆದರೆ ಸಹನಶೀಲತೆ ಎಲ್ಲರಿಗೂ ಅಗತ್ಯವಾಗಿದೆ,” ಎಂದು ಟೆಕಿಯಾನ್ ನ ಚೆನ್ನೈ ಎಂಜಿನಿಯರಿಂಗ್ ಕೇಂದ್ರದ ಮುಖ್ಯಸ್ಥ ಸಂತೋಷ್ ಗೋಲೆಚಾ ಹೇಳಿದರು. “ಈ ಕಾರ್ಯಕ್ರಮ ಕೇವಲ ಜಾಗೃತಿಗಾಗಿ ಅಲ್ಲ, ಮುಂದಿನ ಪೀಳಿಗೆಗೆ ಆರೋಗ್ಯಕರ ಮತ್ತು ಉತ್ತಮ ಭವಿಷ್ಯ ನಿರ್ಮಿಸಲು ಅಗತ್ಯ ಸಾಧನಗಳನ್ನು ನೀಡುವುದರ ಬಗ್ಗೆಇರಲಿದೆ” ಎಂದು ಅವರು ತಿಳಿಸಿದರು. ಈ ಕಾರ್ಯಕ್ರಮವು ದೀರ್ಘಕಾಲಿಕ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಬೆಂಬಲವನ್ನು ಮುಂದುವರಿಸಲು ಸ್ವಯಂಸೇವಕರ ವ್ಯವಸ್ಥೆಯ ಕಡೆಗೂ ಗಮನ ಹರಿಸುತ್ತದೆ. ಭಾವನೆಗಳು, ಸಹಾನುಭೂತಿ, ಸಂವಹನ ಮತ್ತು ಒಟ್ಟಾರೆ ಬೆಳವಣಿಗೆ ಬಗ್ಗೆ ನಡೆಯುವ ಸಂಭಾಷಣೆಗಳನ್ನು ಯುವಜನರು ಮತ್ತು ಶಿಕ್ಷಕರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಡಲು ಈ ಚಟುವಟಿಕೆ ಆಧಾರಿತ ಅವಧಿಗಳನ್ನು ವಿನ್ಯಾಸಗೊಳಿಸಲಾಗಿದೆ.
ಶಾಲೆಯಲ್ಲಿ ಮಾತ್ರವಲ್ಲದೇ, ಟೆಕಿಯಾನ್ ಸಂಸ್ಥೆ 'ಮಾನಸಿಕ ಆರೋಗ್ಯಕ್ಕಾಗಿ ಭಾನುವಾರ' ಕಾರ್ಯಕ್ರಮವನ್ನು ವಿವಿಧ ನಗರಗಳಲ್ಲಿ ಆಯೋಜಿಸುತ್ತಿರುವ ಮೈಂಡ್ ಅಂಡ್ ಮ್ಯಾಟರ್ ಸಂಸ್ಥೆಗೆ ಸಹಾಯ ಮಾಡುತ್ತಿದೆ. ಈ ಸಮುದಾಯ ಕ್ರಮವು ತನ್ನ ವ್ಯಾಪ್ತಿಯನ್ನು ಚೆನ್ನೈ, ಪುದುಚೇರಿ ಮತ್ತು ಬೆಂಗಳೂರು ನಗರಗಳಿಗೆ ವಿಸ್ತರಿಸಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಾ ವಯೋಮಾನದವರಿಗಾಗಿ ಸಹನಶೀಲತೆ ಅಭಿವೃದ್ಧಿಪಡಿಸುವ ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ, ಮೈಂಡ್ ಅಂಡ್ ಮ್ಯಾಟರ್ ಸಂಸ್ಥೆ ಮಾನಸಿಕ ಆರೋಗ್ಯ ಜಾಗೃತಿ ಮತ್ತು ತಡೆಗಟ್ಟುವ ಮಾನಸಿಕ ಆರೋಗ್ಯ ಮಾದರಿಗಳ ಅನುಷ್ಠಾನದ ಮೂಲಕ 27,000 ಕ್ಕೂ ಹೆಚ್ಚು ಜನರ ಜೀವನd ಮೇಲೆ ಪ್ರಭಾವ ಬೀರಿದೆ. ಇತ್ತೀಚಿನ ಅವರ "ಮಾನಸಿಕ ಆರೋಗ್ಯಕ್ಕಾಗಿ ಸಂಗೀತ" ಕಾರ್ಯಕ್ರಮವು ಆರೋಗ್ಯ ಮತ್ತು ಬದುಕಿನ ಬಗ್ಗೆ ಹೊಸತನ ಮತ್ತು ವಿಶ್ವವ್ಯಾಪಿ ದೃಷ್ಟಿಕೋನ ಹೊಂದಿರುವುದರಿಂದ ದೇಶವ್ಯಾಪಿ ಗುರುತು ಗಳಿಸಿದೆ.