ಹುಣಸೂರು: ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಸರ್ಕಾರೇತರ ಸಂಘ, ಸಂಸ್ಥೆಗಳ ಅವಲಂಬನೆ ಅನಿವಾರ್ಯವಾಗಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ನಗರದ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ 140 ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಸಾಟ್(ಒನ್ ಸ್ಕೂಲ್ ಅಟ್ ಎ ಟೈಮ್) ಸಂಸ್ಥೆ ವತಿಯಿಂದ 1 ಕೋಟಿ ರೂ.ವೆಚ್ಚದಡಿ 6 ಕೋಠಡಿಗಳ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆಯಿಂದಾಗಿ ಮುಚ್ಚುವ ಪರಿಸ್ಥಿತಿ ಇರುವ ಕಾಲಘಟ್ಟದಲ್ಲಿ 5 ವರ್ಷಗಳ ಹಿಂದೆ ಕೇವಲ 15 ವಿದ್ಯಾರ್ಥಿಗಳನ್ನು ಹೊಂದಿದ್ದ, ಈ ಶತಮಾನದ ಶಾಲೆ ಇದೀಗ 505 ವಿದ್ಯಾರ್ಥಿಗಳನ್ನು ಹೊಂದಿದೆ ಎಂದರೆ ಶಾಲೆಯ ಮುಖ್ಯಶಿಕ್ಷಕರು , ಎಸ್‌ಡಿಎಂಸಿ, ಶಾಲೆಯನ್ನು ದತ್ತು ಪಡೆದಿರುವ ಕರ್ನಾಟಕ ರಕ್ಷಣಾ ವೇದಿಕೆ ತಂಡದ ದುಡಿಮೆ ನಿಜಕ್ಕೂ ಶ್ಲಾಘನೀಯ ಎಂದರು.
ಪ್ರಸ್ತುತ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಈವರೆಗೆ ಒಂದೇ ಒಂದು ನಯಾಪೈಸೆಯ ಅನುದಾನವನ್ನೂ ನೀಡಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರೇತರ ಸಂಘ, ಸಂಸ್ಥೆಗಳ ಆರ್ಥಿಕ ಸಹಕಾರ ಅನಿವಾರ್ಯವಾಗುತ್ತದೆ. ಈ ದಿಶೆಯಲ್ಲಿ ಒಸಾಟ್‌ಸಂಸ್ಥೆಯ ಹೃದಯ ವೈಶಾಲ್ಯಕ್ಕೆ ಅಭಿನಂದನೆಗಳು ಎಂದರು.
ಮನಸ್ಥಿತಿ ಬದಲಾಗಲಿ: ಒಸಾಟ್ ಸಂಸ್ಥೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 13 ಶಾಲೆಗಳ ಅಭಿವೃದ್ಧಿ ಯೋಜನೆ ಜಾರಿಗೊಳಿಸಿದ್ದು, ಈ ಪೈಕಿ ಹುಣಸೂರು ತಾಲೂಕಿಗೆ 9 ಯೋಜನೆಗಳು ಜಾರಿಗೊಂಡಿರುವುದು ನಮ್ಮೆಲ್ಲರ ಭಾಗ್ಯವಾಗಿದೆ. ಸರ್ಕಾರಿ ಶಾಲೆಗಳ ಉಳಿವು ಅಳಿವು ಪಾಲಕರ ಮೇಲಿದೆ. ಹಣ ತೆತ್ತು ಖಾಸಗಿ ಶಾಲೆಗಳ ಶಿಕ್ಷಣವೇ ಅನಿವಾರ್ಯವೆನ್ನುವ ಮನಸ್ಥಿತಿಯಿಂದ ಪಾಲಕರು ಹೊರಬರಬೇಕಿದೆ ಎಂದು ಸಲಹೆ ನೀಡಿದರು.
ನಮ್ಮ ಸಮಾಜ ಕೂಡ ದೇವಾಲಯಗಳ ನಿರ್ಮಾಣಕ್ಕೆ ಅನುದಾನವನ್ನು ಜನಪ್ರತಿನಿಧಿಗಳಿಂದ ಕೇಳುತ್ತಾರೆಯೇ ಹೊರತು ವಿದ್ಯಾಸರಸ್ವತಿ ದೇಗುಲ ಅಬಿವೃದ್ಧಿ ಪಡಿಸಿ ಎಂದು ಪಟ್ಟು ಹಿಡಿಯುವುದಿಲ್ಲ. ಇಂತಹ ಪರಿಸ್ಥಿತಿ ಬದಲಾಗಬೇಕಿದೆ. ಸರ್ಕಾರವೇ ಎಲ್ಲವನ್ನೂ ಮಾಡಿಕೊಡಬೇಕೆನ್ನುವ ಮನೋಭಾವ ತೊರೆದು ಎಲ್ಲರೂ ಒಂದಾಗಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಚಿತ್ರಣ ಬದಲಾಗಿದೆ: ಮುಖ್ಯಶಿಕ್ಷಕ ಡಾ.ಮಾದುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ,ಎಸ್‌ಡಿಎಂಸಿ ಮತ್ತು ಪಾಲಕರ ಸಮಿತಿಯ ಕ್ರಿಯಾಶೀಲ ಚಟುವಟಿಕೆಗಳು, ಶಾಸಕ ಹರೀಶ್‌ಗೌ ಅವರರಿಂದ ಶಾಲಾ ಆವರಣದಲ್ಲಿ ಆಟಿಕೆಗಳನ್ನು ಅಳವಡಿಸಿಕೊಟ್ಟಿರುವುದು, ಕರವೇ ತಂಡ ಶಾಲೆಯನ್ನು ದತ್ತು ಪಡೆದು ಮೂಲಸೌಕರ್ಯ ಕಲ್ಪಿಸಲು ದಾನಿಗಳನ್ನು ಕರೆತಂದಿದ್ದು, ಮಕ್ಕಳ ಕೊರತೆ ನೀಗಿಸಲು ಮೊದಲ ಬಾರಿಗೆ ಕರವೇ ತಂಡ 18 ಮಕ್ಕಳನ್ನು ಶಾಲೆಗೆ ಸೇರಿಸಿದ್ದು, ವಿವಿಧ ಕ್ಷೇತ್ರಗಳ ದಾನಿಗಳ ಹೃದಯಪೂರ್ವಕ ನೆರವು ಇಂದು ಶಾಲೆಯ ಚಿತ್ರಣವನ್ನೇ ಬದಲಾಗಲು ಕಾರಣವಾಗಿದೆ ಎಂದು ದಾನಿಗಳನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ವಹಿಸಿದ್ದರು. ಒಸಾಟ್ ಸಂಸ್ಥೆಯ ಸುಬ್ರಮಣ್ಯ, ಇಂಜಿನಿಯರ್ ಹರೀಶ್, ಚಲುವಾಂಬ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ.ದಮಯಂತಿ, ಚೋಳೇನಹಳ್ಳಿ ಶಾಲೆಯ ಶಿಕ್ಷಕಿ ಪದ್ಮಾವತಿ, ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್, ನಗರಾಧ್ಯಕ್ಷ ಮುನಾವರ್ ಪಾಷಾ, ಪಾಲಕರ ಸಮಿತಿ ಅಧ್ಯಕ್ಷ ರಫೀಕ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಶೋಕ್, ಎಸ್‌ಡಿಎಂಸಿ ಸದಸ್ಯರಾದ ನಾಗರಾಜ್, ಶಿವರಾಮು, ಸಿಆರ್‌ಪಿ ಸ್ಮಿತಾಶಿಂಧೆ, ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.