ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಭಾಗಶಃ ಪ್ರಕಟವಾಗಿದ್ದು, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಟ್ರಂಪ್ ಭಾರತದ ಉತ್ತಮ ಸ್ನೇಹಿತ ಎಂಬುದು ನಿಜವಾದರೂ, ಅವರ ವಿದೇಶಾಂಗ ನೀತಿಗಳ ಬಗ್ಗೆ ಭಾರತಕ್ಕೆ ಅಳುಕಿದೆ. ಅವರ ‘ಅಮೆರಿಕ ಫಸ್ಟ್’ ನೀತಿ, ವಿದೇಶಿ ವಸ್ತುಗಳ ಆಮದಿನ ಮೇಲೆ ತೆರಿಗೆ ಏರಿಸುವ ಹೇಳಿಕೆ ಭಾರತಕ್ಕೆ ಈಗಾಗಲೇ ಆತಂಕ ಮೂಡಿಸಿದೆ. ಆದರೆ, ಟ್ರಂಪ್ ಆಯ್ಕೆ ಖಚಿತವಾಗುತ್ತಿದ್ದಂತೆಯೇ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹೃದಯತುಂಬಿ ಅಭಿನಂದಿಸಿರುವುದು ಭಾರತದ ಆತ್ಮವಿಶ್ವಾಸವನ್ನು ಮತ್ತು ಆಶಾವಾದಿ ಮನೋಭಾವವನ್ನು ತೋರಿಸುತ್ತದೆ.
2017-21ರ ತಮ್ಮ ಮೊದಲ ಅಧ್ಯಕ್ಷಾವಧಿಯಲ್ಲಿ ಟ್ರಂಪ್ ಚೀನಾ ಮತ್ತು ಪಾಕಿಸ್ತಾನಗಳೆರಡನ್ನೂ ದೂರವಿಟ್ಟು ಭಾರತದೊಂದಿಗಿನ ಸಂಬಂಧಗಳನ್ನು ವೃದ್ಧಿಸುವುದಕ್ಕೆ ಮಹತ್ವ ನೀಡಿದ್ದರು ಎಂಬುದು ಗಮನಾರ್ಹ. ಈ ಬಾರಿಯ ದೀಪಾವಳಿಯ ಸಂದರ್ಭದಲ್ಲಿ ಟ್ರಂಪ್ ಹಬ್ಬದ ಶುಭಾಶಯಗಳನ್ನು ತಿಳಿಸುತ್ತ, ‘ನಾನು ಅಧ್ಯಕ್ಷನಾದರೆ ಭಾರತದೊಂದಿಗಿನ ಮಹಾನ್ ಮೈತ್ರಿಯನ್ನು ವೃದ್ಧಿಸಲು ಶ್ರಮಿಸುತ್ತೇನೆ’ ಎಂದು ಹೇಳಿದ್ದರು. 2025ರ ಜನವರಿ 20ರಂದು ಅಧಿಕಾರ ಸ್ವೀಕರಿಸಲಿರುವ ಟ್ರಂಪ್ ಈ ನಿಟ್ಟಿನಲ್ಲಿ ಎಷ್ಟೆಲ್ಲ ಪ್ರಯತ್ನ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕು. ಜಾಗತಿಕ ರಾಜಕಾರಣದಲ್ಲಿ ಅಮೆರಿಕ ಮುಖ್ಯಪಾತ್ರ ವಹಿಸಿದೆ. ಹೀಗಿರುವಾಗ ಭಯೋತ್ಪಾದನೆ ವಿರುದ್ಧದ ಸಮರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾಗಿ ನಡೆಸಲು ಟ್ರಂಪ್ ಆದ್ಯತೆ ನೀಡಬೇಕಿದೆ.
ರಷ್ಯಾ-ಯೂಕ್ರೇನ್, ಇಸ್ರೇಲ್-ಹಮಾಸ್ ಸೇರಿದಂತೆ ಹಲವು ದೇಶಗಳು ಯುದ್ಧದಲ್ಲಿ ತೊಡಗಿದ್ದು, ಯುದ್ಧದಿಂದ ಯಾವುದೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲವೆಂದು ಜಾಗತಿಕ ನಾಯಕರಿಗೆ ಮನದಟ್ಟು ಮಾಡಿಕೊಟ್ಟು, ಶಾಂತಿಸ್ಥಾಪನೆಗೆ ಮುಂದಾಗಬೇಕಿದೆ. ಭಾರತವಂತೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹಲವು ಬಾರಿ ಶಾಂತಿ ಸ್ಥಾಪನೆ ಬಗೆಗಿನ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ ಮತ್ತು ಭಯೋತ್ಪಾದನೆ ವಿರುದ್ಧವೂ ಪರಿಣಾಮಕಾರಿಯಾದ ಹೋರಾಟ ನಡೆಸುತ್ತಿದೆ. ಪಾಕಿಸ್ತಾನ, ಅಪ್ಘಾನಿಸ್ತಾನ, ಬಾಂಗ್ಲಾದೇಶ, ಕೆನಡಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಹಿಂದುಗಳು ಆತಂಕದಿಂದ ಬದುಕು ಸಾಗಿಸುವಂತಾಗಿದೆ. ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿದ್ದ ಟ್ರಂಪ್, ತಾವು ಅಧಿಕಾರಕ್ಕೆ ಬಂದರೆ ಹಿಂದುಗಳ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಅದರ ಅನುಷ್ಠಾನಕ್ಕೂ ಅವರು ಮುಂದಾಗಬೇಕಿದೆ.
ಅಲ್ಲದೆ, ಟ್ರಂಪ್ ಆಯ್ಕೆ ಭಾರತದ ಆರ್ಥಿಕ ಹಿತಾಸಕ್ತಿಗಳಿಗೆ ಮಾರಕವಾಗಬಹುದು ಎಂಬ ಆತಂಕವೂ ಇದೆ. ‘ಅಮೆರಿಕ ಮೊದಲು’ ನೀತಿಯನ್ನು ಜಾರಿಗೊಳಿಸುವ ಭರದಲ್ಲಿ ಅವರು ಭಾರತದ ಮೇಲೆ ತೆರಿಗೆ ಹೆಚ್ಚಿಸಿದ್ದಲ್ಲಿ ತೊಂದರೆ ತಪ್ಪಿದ್ದಲ್ಲ. ಜಾಗತಿಕ ರಾಜಕೀಯದ ಸಮೀಕರಣಗಳು ಬದಲಾಗಿರುವುದರಿಂದ ಈ ಅವಧಿಯಲ್ಲಿ ಟ್ರಂಪ್ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ. ವಿಶೇಷವಾಗಿ, ವಿದೇಶಾಂಗ ನೀತಿಯಲ್ಲಿ ಅವರು ಕೈಗೊಳ್ಳುವ ನಿರ್ಧಾರಗಳು ಕುತೂಹಲ ಮೂಡಿಸಿವೆ. ಅದೇನಿದ್ದರೂ, ಸ್ಪಷ್ಟ ಬಹುಮತದೊಂದಿಗೆ ಐತಿಹಾಸಿಕ ಗೆಲುವು ಸಾಧಿಸಿರುವ ಟ್ರಂಪ್ ಅವರ ಈ ಅವಧಿಯಲ್ಲಿ ಅಮೆರಿಕದೊಂದಿಗೆ ಭಾರತ ಹೊಂದಿರುವ ವ್ಯಾಪಾರ ಮತ್ತು ಆರ್ಥಿಕ ಸಂಬಂಧವು ಇನ್ನಷ್ಟು ಬಲಗೊಳ್ಳಲಿ ಎಂಬುದೇ ಎಲ್ಲರ ಆಶಯ.