ಹೊಸನಗರದ ಕಾರಣಗಿರಿಯಲ್ಲಿ ಹಿರಿಯ ಪತ್ರಕರ್ತರಿಗೆ ನಾರದ ಪುರಸ್ಕಾರ ಪ್ರದಾನ ಮಾಡಲಾಯಿತು. ಹಾದಿಗಲ್ಲು ಲಕ್ಷ್ಮೀನಾರಾಯಣ, ನಳೀನಚಂದ್ರ, ಹನಿಯ ರವಿ, ರಾಜೇಶ್ ಪದ್ಮಾರ್, ವಸುಧಾ ಚೈತನ್ಯ ಮತ್ತಿತರರಿದ್ದರು. 
ನ್ಯೂಸ್

ಜ್ಞಾನ ವೃದ್ಧಿಸಿಕೊಳ್ಳಲು ಪತ್ರಿಕೆಗಳು ಸಹಕಾರಿ: ಪದ್ಮಾರ್

ಅರವಿಂದ ಅಕ್ಲಾಪುರ

ಶಿವಮೊಗ್ಗ: ನಾರದಮುನಿ ಓರ್ವ ಆದ್ಯ ಪತ್ರಕರ್ತ. ನಾರದಮುನಿಯನ್ನು ವಿದ್ವಾಂಸ, ಅನೇಕ ವಿಷಯಗಳ ಪ್ರತಿಪಾದಕನಾಗಿ ಗುರುತಿಸುವ ಬದಲು ಅವರನ್ನು ಒಬ್ಬ ವಿದೂಷಕನಂತೆ ಕಲ್ಪನೆ ಮಾಡಿಕೊಟ್ಟಿರುವುದು ದುರಂತ ಎಂದು ವಿಶ್ವ ಸಂವಾದ ಕೇಂದ್ರದ ವಿಶ್ವಸ್ತ ರಾಜೇಶ್ ಪದ್ಮಾರ್ ಹೇಳಿದರು.

ಹೊಸನಗರ ತಾಲೂಕು ಕಾರಣಗಿರಿಯ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್, ರಾಷ್ಟ್ರೋತ್ಥಾನ ಬಳಗ ಮತ್ತು ಕಲಾದರ್ಶನ ಮಾಸ ಪತ್ರಿಕೆಯಿಂದ ಗುರುವಾರ ಏರ್ಪಡಿಸಿದ್ದ ಪ್ರಥಮ ಸುದ್ದಿವಾಹಕ ಮಹರ್ಷಿ ನಾರದರ ಸಂಸ್ಮರಣೆಯಲ್ಲಿ ನೀಡುವ ನಾರದ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಭಾರತವನ್ನು ಕೀಳಾಗಿ ಕಾಣುತ್ತಿದ್ದ ವೇಳೆ 1826ರಲ್ಲಿ ಪಂಡಿತ್ ಜುಗಲ್ ಕಿಶೋರ್ ಶುಕ್ಲಾ ಅವರು ಭಾರತದ ಮೊಟ್ಟ ಮೊದಲ ಪತ್ರಿಕೆ ಉದ್ದಂಡ ಮಾರ್ತಾಂಡ ಪತ್ರಿಕೆಯ ಮೊದಲ ಸಂಚಿಕೆಯನ್ನು ದೇವರ್ಷಿ ನಾರದರಿಗೆ ಸಮರ್ಪಣೆ ಮಾಡಿರುವುದನ್ನು ನಾವು ಗಮನಿಸಬೇಕು ಎಂದು ತಿಳಿಸಿದರು.

ಪತ್ರಿಕೆಗಳು ಸಮಾಜಕ್ಕೆ ಮಾಹಿತಿಯ ಮೂಲ, ಜ್ಞಾನ ವೃದ್ಧಿಗೆ ಸಹಕಾರಿ ಮತ್ತು ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವು ಪ್ರಪಂಚದಾದ್ಯಂತ ನಡೆಯುವ ಘಟನೆಗಳ ಬಗ್ಗೆ ತಿಳಿಸುತ್ತವೆ. ಜನರಲ್ಲಿ ಜಾಗೃತಿ ಹೆಚ್ಚಿಸುತ್ತವೆ. ಈಗಾಗಲೇ ಹಲವು ರಾಜ್ಯಗಳಲ್ಲಿ ನಾರದರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ ಮಾತನಾಡಿ, ಪ್ರತಿದಿನ ಪತ್ರಿಕೆಯ ಓದು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಹಕಾರಿ ಎಂದು ತಿಳಿಸಿದರು.

ಪತ್ರಿಕಾ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರಾದ ಕಿನ್ನಿಗೋಳಿಯ ಸಚ್ಚಿದಾನಂದ ಉಡುಪ, ಶಿವಮೊಗ್ಗದ ಸಿ.ವಿ.ರಾಘವೇಂದ್ರ ರಾವ್, ಬೆಂಗಳೂರಿನ ಹಿರಿಯೂರು ರಾಘವೇಂದ್ರ, ಕಟೀಲಿನ ಯಕ್ಷಪ್ರಭಾ ಪತ್ರಿಕೆ ಉಪಸಂಪಾದಕ, ಯಕ್ಷಗಾನ ಕಲಾವಿದ ಶ್ರುತಕೀರ್ತಿರಾಜ, ಹೊಸನಗರದ ರಾಮಕೃಷ್ಣಮೂರ್ತಿ, ಸದಾನಂದ ಅವರಿಗೆ ನಾರದ ಪುರಸ್ಕಾರ ಪ್ರದಾನ ಮಾಡಲಾಯಿತು.

ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳೀನಚಂದ್ರ, ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ, ಪ್ರಮುಖರಾದ ವಸುಧಾ ಚೈತನ್ಯ, ವಿನಾಯಕ ಪ್ರಭು, ನಿವೃತ್ತ ಸೈನಿಕ ಕೆ.ಪಿ.ಕೃಷ್ಣಮೂರ್ತಿ, ಡಾ. ರಾಮಚಂದ್ರ ರಾವ್, ಶ್ರೀಧರ ಇತರರಿದ್ದರು.