ನ್ಯೂಸ್

ಆರೋಗ್ಯವರ್ಧಕ ವೃತ್ತಿ ಪತ್ರಿಕಾ ವಿತರಣೆ

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ

ಕಾಯಕ. ವಿತರಕರಿಲ್ಲದೆ ದಿನಪತ್ರಿಕೆಗಳಿಲ್ಲ ಎಂಬಷ್ಟರ ಮಟ್ಟಿಗೆ ಪತ್ರಿಕಾ ವ್ಯವಸ್ಥೆಗೆ ಇವರು ಅನಿವಾರ್ಯ ಬೆನ್ನೆಲುಬು. ಏಕೆಂದರೆ, ಪತ್ರಿಕೆಗಳನ್ನು ಎಷ್ಟು ಒಪ್ಪ-ಓರಣವಾಗಿ ಸಿದ್ಧಪಡಿಸಿದ ಬಳಿಕವೂ ಅದನ್ನು ಓದುಗರ ಮನೆಬಾಗಿಲಿಗೆ ತಲುಪಿಸುವ ಆಪದ್ಬಾಂಧವರು ಇವರೇ. ಮನೆಯಲ್ಲಿ ಮದುವೆ ಇರಲಿ, ಸೂತಕವಿರಲಿ, ವಿತರಕರು ಯಾವತ್ತೂ ತಮ್ಮ ಕಾಯಕ ತಪ್ಪಿಸುವವರಲ್ಲ. ಕರೊನಾ ಸಂಕಷ್ಟದ ಸಂದರ್ಭ ಇಡೀ ದೇಶವೇ ಲಾಕ್​ಡೌನ್ ಆಗಿದ್ದಾಗಲೂ ಮನೆ-ಮನೆಗೆ ಪತ್ರಿಕೆ ತಲುಪಿಸಿದ ವಾರಿಯರ್ಸ್ ಇವರು. ಶುಕ್ರವಾರ (ಸೆ.4) ಪತ್ರಿಕಾ ವಿತರಕರ ದಿನ. ಈ ಹಿನ್ನೆಲೆಯಲ್ಲಿ ಪತ್ರಿಕಾ ವಿತರಣೆಗೇ ತಮ್ಮ ಜೀವನ ಸಮರ್ಪಿಸಿಕೊಂಡು, ಹತ್ತಾರು ಮಂದಿಗೆ ಉದ್ಯೋಗದಾತರಾಗಿರುವ, ಈ ವೃತ್ತಿಯಿಂದಲೇ ಉತ್ತಮ ಬದುಕು ಕಟ್ಟಿಕೊಂಡು ಮಾದರಿ ಆಗಿರುವ ವಿತರಕ ಬಂಧುಗಳ ಯಶೋಗಾಥೆಯನ್ನು ನಾಡಿಗೆ ಪರಿಚಯಿಸುವ ಕಿರು ಪ್ರಯತ್ನ ಇಲ್ಲಿದೆ. ವಿಜಯವಾಣಿಯ ಎಲ್ಲ ವಿತರಕ ಬಾಂಧವರಿಗೆ ಪತ್ರಿಕಾ ವಿತರಕರ ದಿನ ಶುಭಾಶಯಗಳು.
ಮಂಜುನಾಥ ಶೆಣೈ ಕುಂದಾಪುರ

ಉಡುಪಿ ಜಿಲ್ಲೆ ಕುಂದಾಪುರದ ಜನ್ನಾಡಿಯಲ್ಲಿ 42 ವರ್ಷಗಳಿಂದ ಪತ್ರಿಕೆ ವಿತರಕರಾಗಿ ಸಾರ್ಥಕ ಜೀವನ ನಡೆಸುತ್ತಿದ್ದಾರೆ ಜಿ. ಮಂಜುನಾಥ್ ಶೆಣೈ ಜನ್ನಾಡಿ. ತಂತ್ರಜ್ಞಾನ, ವಾಹನ ಸೌಲಭ್ಯ ಇಲ್ಲದ ಕಾಲದಲ್ಲಿ ಮುಂಜಾನೆ 4ಕ್ಕೆ ಎದ್ದು ಗ್ರಾಮೀಣ ಭಾಗದ ಮೂಲೆ ಮೂಲೆಗೂ ತೆರಳಿ, ಮಳೆ-ಗಾಳಿ-ಚಳಿ ಲೆಕ್ಕಿಸದೆ ಸರಿಯಾದ ಸಮಯಕ್ಕೆ ಪತ್ರಿಕೆ ತಲುಪಿಸುತ್ತಿದ್ದವರು ಇವರು. ಸುತ್ತಲ ಕಾಡು, ಗುಡ್ಡ, ಹಳ್ಳಿ ಸೇರಿ 25-30 ಕಿ.ಮೀ. ವರೆಗೆ ಸೈಕಲ್​ನಲ್ಲೇ ಸಂಚರಿಸುವ ಕಾರ್ಯವ್ಯಾಪ್ತಿ ಇವರದ್ದು. ಇಳಿ ವಯಸ್ಸಿನಲ್ಲಿ, ಎಂಥ ಕಷ್ಟದಲ್ಲೂ ಸೈಕಲ್​ನಲ್ಲೇ ಮನೆಗಳಿಗೆ ತೆರಳಿ ಸುದ್ದಿ ಮುಟ್ಟಿಸುವ ಗಟ್ಟಿತನ ಶೆಣೈ ಅವರದ್ದು. ಹೈನುಗಾರಿಕೆ, ಕೃಷಿ ಇವರ ನೆಚ್ಚಿನ ಕಾಯಕ. ಪತ್ರಿಕೆ ವಿತರಣೆ ಜತೆಗೆ ವರದಿಗಾರಿಕೆ ಮೂಲಕ ಗ್ರಾಮೀಣ ಜನರ ಸಮಸ್ಯೆಗೆ ದನಿಯಾಗಿ, ಸ್ಥಳೀಯರ ಪ್ರೀತಿಗೂ ಪಾತ್ರರಾಗಿದ್ದಾರೆ. ಇಳಿ ವಯಸ್ಸಿನಿಂದಾಗಿ ಪತ್ರಿಕೆ ವಿತರಣೆಗೆ 7 ವರ್ಷಗಳಿಂದ ಈಚೆಗೆ ಇಬ್ಬರನ್ನು ಕೆಲಸಕ್ಕಿರಿಸಿಕೊಂಡಿದ್ದೇನೆ. ಪತ್ರಿಕೆ ವಿತರಣೆಗಾಗಿ ಬೆಳಗ್ಗೆ ಬೇಗ ಏಳುವುದು, ಸೈಕಲ್ ಸವಾರಿ ಉತ್ತಮ ಆರೋಗ್ಯ ನೀಡಿದೆ ಎನ್ನುತ್ತಾರೆ ಶೆಣೈ.