ಶಿವಮೊಗ್ಗದಲ್ಲಿ ಆಯೋಜಿಸಿದ್ದ ಪತ್ರಿಕಾ ವಿತರಕರ ಉತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿದರು. ಕೆ.ಶಂಭುಲಿಂಗ, ಎನ್.ಮಾಲತೇಶ್, ಮುಖ್ತಾರ್ ಅಹಮದ್(ನಜೀರ್), ಜಿ.ರಾಮು, ಜಿ.ಐ.ಮಲ್ಲಿಕಾರ್ಜುನ, ಪರಶುರಾಮ ರಾವ್, ಟಿ.ಮಧು ಇದ್ದರು.  
ನ್ಯೂಸ್

ಮಲೆನಾಡಲ್ಲಿ ಪತ್ರಿಕಾ ವಿತರಕರ ಉತ್ಸವ

ಶಿವಮೊಗ್ಗ: ಓದುಗರ ಮನೆ ಮನೆಗೆ ಪತ್ರಿಕೆಗಳನ್ನು ಪ್ರತಿದಿನವೂ ಅತ್ಯಂತ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಶ್ಲಾಘನೀಯ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ನಗರದಲ್ಲಿ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪತ್ರಿಕಾ ವಿತರಕರ ಉತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು.

ಚಳಿ, ಮಳೆ, ಗಾಳಿಯನ್ನೂ ಲೆಕ್ಕಿಸದೆ ಓದುಗರಿಗೆ ಪತ್ರಿಕೆಗಳನ್ನು ಮುಟ್ಟಿಸುತ್ತಿರುವ ವಿತರಕರಿಗೆ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಎರಡು ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಅದನ್ನು ವಿತರಕರು ಮತ್ತು ಅವರ ಕುಟುಂಬದವರಿಗೆ ಸದ್ಬಳಕೆ ಆಗಬೇಕಿದೆ. ಆ ನಿಟ್ಟಿನಲ್ಲಿ ವಿತರಕರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ತಂತ್ರಜ್ಞಾನ ಮುಂದಿವರಿದಿದೆ. ಕ್ಷಣಾರ್ಧದಲ್ಲಿ ದೇಶ, ವಿದೇಶಗಳ ಮಾಹಿತಿಗಳು ಲಭಿಸಿದರೂ ನಾವು ಪ್ರತಿಕೆಗಳಲ್ಲಿ ದಿನನಿತ್ಯದ ಸುದ್ದಿ ಓದುವುದು ಅವಶ್ಯಕ. ಇದಕ್ಕೆ ಕೊಂಡಿಯಾಗಿರುವ ವಿತರಕರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆ ಉಂಟಾದಾಗ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಹೆಚ್ಚಿರುತ್ತದೆ. ಚಿಕಿತ್ಸೆಗೂ ಹಣಕಾಸಿನ ತೊಂದರೆಗಳನ್ನು ಎದುರಿಸುವರು. ಹಾಗಾಗಿ ವಿತರಕರನ್ನು ಆರೋಗ್ಯ ವಿಮೆ ವ್ಯಾಪ್ತಿಗೆ ಸರ್ಕಾರ ತರಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ಶಿವಮೊಗ್ಗ ಸ್ಥಾನಿಕ ಸಂಪಾದಕರಾದ ಚಂದ್ರಶೇಖರ್ ಶೃಂಗೇರಿ, ಹಿರಿಯ ಪತ್ರಕರ್ತರಾದ ಭಂಡಿಗಡಿ ನಂಜುಂಡಪ್ಪ, ಎನ್.ಆರ್.ವೆಂಕಟೇಶ್,ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ, ಜಿಲ್ಲಾಧ್ಯಕ್ಷ ಎನ್.ಮಾಲತೇಶ್, ಪ್ರಧಾನ ಕಾರ್ಯದರ್ಶಿ ಮುಖ್ತಾರ್ ಅಹಮದ್(ನಜೀರ್), ಉಪಾಧ್ಯಕ್ಷ ಜಿ.ರಾಮು, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಐ.ಮಲ್ಲಿಕಾರ್ಜುನ, ಸಂಘಟನಾ ಕಾರ್ಯದರ್ಶಿ ಪರಶುರಾಮ ರಾವ್, ಖಜಾಂಚಿ ಟಿ.ಮಧು, ಪ್ರಾಣೇಶ್, ದುರ್ಗೋಜಿ, ಪ್ರಶಾಂತ್ ಇತರರಿದ್ದರು.

ಕುಟುಂಬಗಳಿಗೆ ಆಟೋಟ

ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರ ಉತ್ಸವ ಅದ್ದೂರಿಯಾಗಿ ನೆರವೇರಿತು. ನಗರದ ನೆಹರು ರಸ್ತೆ ಗಾಂಧಿ ಭವನದಲ್ಲಿ ವರ್ಷಾಂತ್ಯದ ಭಾನುವಾರ ವಿತರಕರಲ್ಲಿ ಸಂಭ್ರಮ ಮನೆ ಮಾಡಿತ್ತು. ಕುಟುಂಬ ವರ್ಗದೊಂದಿಗೆ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಬೆಳಗಿನ ಜಾವ ಪತ್ರಿಕೆಗಳನ್ನು ಜೋಡಿಸಿ ಪ್ಯಾಕ್ ಮಾಡಿಕೊಂಡು ಓದುಗರ ಮನೆ ಮನೆಗೆ ತಲುಪಿಸುವ ವಿತರಕರು ಗಾಂಧಿಭವನದಲ್ಲಿ ಕುಣಿದು ಕುಪ್ಪಳಿಸಿದರು. ವಿವಿಧ ಕ್ರೀಡೆಗಳಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದು ವಿತರಕರ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು. ಉತ್ಸವದ ಆರಂಭಕ್ಕೂ ಮುನ್ನ ಇತ್ತೀಚೆಗೆ ಅಗಲಿದ ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್, ಮಾಜಿ ಮುಖ್ಯಮಂತಿ ಎಸ್.ಎಂ.ಕೃಷ್ಣ, ಹುತಾತ್ಮರಾದ ಐವರು ಸೈನಿಕರ ಗೌರವಾರ್ಥ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಹಿರಿಯ ವಿತರಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಖ್ತಾರ್ ಅಹಮದ್(ನಜೀರ್), ಸೀತಾರಾಮ್ ದೇವರಾಜ್ ಶೆಟ್ಟಿ, ತೀರ್ಥಹಳ್ಳಿಯ ನಾಗಭೂಷಣ್, ಶಿಕಾರಿಪುರದ ಹುಲಿಗಿ ಕೃಷ್ಣ, ಭದ್ರಾವತಿ ಜಿ.ಐ.ಮಲ್ಲಿಕಾರ್ಜುನ, ಸೋಮಶೇಖರ್ ಅರಳಿಹಳ್ಳಿ, ವಿನಯ್ಕುಮಾರ್ ಎಸ್. ವಾಲಿ, ಶಿರಾಳಕೊಪ್ಪದ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.