ನ್ಯೂಸ್

ಶತಮಾನೋತ್ಸವ ಆಚರಣೆ ಮುಂದೂಡುವಂತೆ ಆಗ್ರಹ; ಬಸವೇಶ್ವರ ಬ್ಯಾಂಕ್ ಮಾಜಿ ನಿರ್ದೇಶಕ ರಾಜಶೇಖರಯ್ಯ ಹೇಳಿಕೆ

ರಾಣೆಬೆನ್ನೂರ: ಇಲ್ಲಿಯ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕ್ ಸ್ಥಾಪನೆಯಾಗಿ ನೂರು ವರ್ಷ ಪೂರ್ಣಗೊಳ್ಳುವ ಮೊದಲೇ ಈಗಿನ ಆಡಳಿತ ಮಂಡಳಿಯು ಸೆ. 24ರಂದು ಶತಮಾನೋತ್ಸವ ಆಚರಣೆಗೆ ಮುಂದಾಗಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಕೂಡಲೇ ಅದನ್ನು ಮುಂದೂಡಬೇಕು ಎಂದು ಬ್ಯಾಂಕ್‌ನ ಮಾಜಿ ನಿರ್ದೇಶಕ ರಾಜಶೇಖರಯ್ಯ ಸುರಳಿಕೇರಿಮಠ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸಂಘ-ಸಂಸ್ಥೆ ಅಥವಾ ಬ್ಯಾಂಕ್‌ಗಳಾಗಲಿ ನೂರು ವರ್ಷ ಸಂಪೂರ್ಣಗೊಂಡ ನಂತರವೇ ಅದರ ಶತಮಾನೋತ್ಸವ ಆಚರಿಸುವುದು ವಾಡಿಕೆಯಾಗಿದೆ. ಬಸವೇಶ್ವರ ಬ್ಯಾಂಕ್ 7-3-1924ರಲ್ಲಿ ಸ್ಥಾಪನೆಯಾಗಿದ್ದು 7-3-2024ಕ್ಕೆ 100 ವರ್ಷಗಳು ಪೂರ್ಣಗೊಳ್ಳುತ್ತವೆ. ಅದಾದ ಮೇಲೆ ಶತಮಾನೋತ್ಸವ ಆಚರಿಸಿದಲ್ಲಿ ಅದಕ್ಕೊಂದು ಅರ್ಥ ಬರುತ್ತದೆ.
ಆದರೆ, ಈಗಿನ ಆಡಳಿತ ಮಂಡಳಿಯು ಸೆ. 22ರಂದು ಬ್ಯಾಂಕ್‌ನ 99ನೇ ವಾರ್ಷಿಕ ಸಾಮಾನ್ಯ ಸಭೆ ನಿಗದಿಪಡಿಸಿದೆ. ಅದಾದ ಎರಡು ದಿನಗಳ ನಂತರ ಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ. ಈ ವರ್ಷದ ಡಿಸೆಂಬರ್ ಅಥವಾ ಮುಂದಿನ ವರ್ಷದ ಜನೇವರಿ ತಿಂಗಳಿನಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು, ಆಗ ಹೊಸ ಆಡಳಿತ ಮಂಡಳಿ ಅಸ್ತೀತ್ವಕ್ಕೆ ಬಂದಲ್ಲಿ ತಮಗೆ ಶತಮಾನೋತ್ಸವ ಆಚರಿಸುವ ಅವಕಾಶ ತಪ್ಪಬಹುದು ಎಂಬ ದುರಾಲೋಚನೆಯಿಂದ ತರಾತುರಿಯಲ್ಲಿ ಶತಮಾನೋತ್ಸವ ಆಚರಿಸಲು ನಿರ್ಧರಿಸಿದ್ದಾರೆ.
ಅಲ್ಲದೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ಶೇರುದಾರರಿಗೆ ಕಳುಹಿಸಿದೆ. ಆದ್ದರಿಂದ ಇದನ್ನು ಕೈಬಿಟ್ಟು ಮುಂದಿನ ವರ್ಷವೇ ಶತಮಾನೋತ್ಸವ ಆಚರಿಸಬೇಕು ಎಂದು ಆಗ್ರಹಿಸಿ ಈಗಾಗಲೇ ರಾಜ್ಯದ ಸಹಕಾರ ಇಲಾಖೆ ಸಚಿವರು, ಸಹಕಾರ ಇಲಾಖೆ ಕಾರ್ಯದರ್ಶಿಗಳು, ಸಹಕಾರ ಸಂಘಗಳ ಹಾವೇರಿ ಉಪ ವಿಭಾಗದ ಸಹಾಯಕ ನಿಬಂಧಕರಿಗೆ ಪತ್ರ ಬರೆದಿದ್ದೇವೆ. ಒಂದು ವೇಳೆ ಅವರಿಂದ ಸೂಕ್ತ ಕ್ರಮ ಜರುಗಿಸಿದ್ದರೆ ಶತಮಾನೋತ್ಸವ ಆಚರಣೆ ನಡೆಸುವುದರ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು.
ಬ್ಯಾಂಕ್‌ನ ಶೇರುದಾರ ಸತೀಶ ಅಜ್ಜೇವಡಿಮಠ, ರೈತ ಮುಖಂಡ ಹನುಮಂತಪ್ಪ ಕಬ್ಬಾರ ಸುದ್ದಿಗೋಷ್ಠಿಯಲ್ಲಿದ್ದರು.