ನ್ಯೂಸ್

ಪ್ಯಾಕ್ಸ್ ಹಾವಳಿ, ಗ್ರಾಮೀಣ ಆರ್ಥಿಕತೆ ದಿವಾಳಿ: ರಾಜಕೀಯ ದುರ್ಲಾಭಕ್ಕೆ ಸಹಕಾರ ವ್ಯವಸ್ಥೆ ಬಲಿ?; ಕೃಷಿಗೆ ಸಂಬಂಧಿಸಿದ ಸಂಘಗಳ ಸ್ಥಿತಿ ಅಧೋಗತಿ

ಬೆಂಗಳೂರು: ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್) ತೆರೆಯುವ ಧಾವಂತದಿಂದ ಗ್ರಾಮೀಣ ಅರ್ಥ ವ್ಯವಸ್ಥೆಯೇ ದಿವಾಳಿಯಾಗಲಿದೆ ಎಂಬ ಆತಂಕ ಇನ್ನಷ್ಟು ಹೆಚ್ಚಿದೆ.ಹೊಸ ಸಂಘಗಳು ಹಾಗೂ ಚಾಲ್ತಿ ಪ್ಯಾಕ್ಸ್​ಗಳನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಸರ್ಕಾರದ ದ್ವಂದ್ವ ನಿಲುವು ಎದ್ದು ಕಾಣುತ್ತಿದ್ದು, ನಿಯಮಾವಳಿ ಪಾಲಿಸುವಂತೆ ಸೂಚಿಸಬೇಕಾದ ಸಹಕಾರ ಸಚಿವರ ಮೌನ ಸಂಶಯಕ್ಕೆ ಪುಷ್ಟಿ ನೀಡಿದೆ.

ಬೆಳಗಾವಿ ಜಿಲ್ಲೆಯ ಕಿತ್ತೂರು, ಬೈಲಹೊಂಗಲ ಹಾಗೂ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಿಯಮಬಾಹಿರವಾಗಿ ಹೊಸ ಪ್ಯಾಕ್ಸ್ ಸ್ಥಾಪನೆಗೆ ಅನುಮತಿ ಕೊಟ್ಟಿದ್ದನ್ನು ಇಲಾಖೆ ಪ್ರಶ್ನಿಸಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್, ವಿಚಾರಣೆ ನಡೆಸಿದೆ. ಮತ್ತೊಂದೆಡೆ ಅದೇ ಸಂಘಗಳ ಉದ್ಘಾಟನೆಗೆ ಭರ್ಜರಿ ತಯಾರಿಯೂ ನಡೆದಿದೆ. ಅಲ್ಲದೆ, ರಾಜ್ಯಾದ್ಯಂತ ಬಹಳಷ್ಟು ಜಿಲ್ಲೆಗಳಲ್ಲಿ ಹೊಸ ಸಂಘಗಳು ತಲೆ ಎತ್ತುವುದಕ್ಕೆ ಪೂರ್ವಭಾವಿ ಪರವಾನಗಿ ಪಡೆದಿದ್ದು, ಸಹಕಾರ ರಂಗ ಅಯೋಮಯ ಪರಿಸ್ಥಿತಿಗೆ ಸಿಲುಕಿದೆ.

ಈ ಕ್ರಮ ಅನುಸರಿಸಿದರೆ ಸಾಕು: ಗ್ರಾಮೀಣ ಆರ್ಥಿಕ ವ್ಯವಸ್ಥೆ ಸಬಲತೆ, ಹೊಸ ರೈತ ಸದಸ್ಯರಿಗೆ ಶೂನ್ಯ ಬಡ್ಡಿ ಸಾಲ, ಇನ್ನಿತರ ಸವಲತ್ತು ಸಿಗಬೇಕೆಂಬ ಉದ್ದೇಶದಿಂದ ಹೊಸ ಪ್ಯಾಕ್ಸ್ ಸ್ಥಾಪನೆಗೆ ಅನುಕೂಲತೆ ಕಲ್ಪಿಸಲಾಗಿದೆ. ಪರವಾನಗಿಗೆ ವಿಧಿಸಿದ್ದ 6,000 ಎಕರೆ ಸಾಗುವಳಿ ಜಮೀನು ಪ್ರಮಾಣವನ್ನು 4,000 ಎಕರೆ ಇಳಿಸಿದ್ದು, 600 ಕುಟುಂಬಗಳು, ಐದು ಕಿ.ಮೀ. ಪರಿಧಿಯನ್ನು ನಿಗದಿಪಡಿಸಿ ನಬಾರ್ಡ್ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಪ್ಯಾಕ್ಸ್​ಗಳಲ್ಲಿ ಏಕಸ್ವಾಮ್ಯ, ಸಾಲ ನೀಡುವುದಕ್ಕೆ ಸತಾಯಿಸುವುದು, ಅವ್ಯವಹಾರಗಳಿಗೆ ಕಡಿವಾಣ ಜತೆಗೆ ಹೊಸ ಸಂಘ ಸ್ಥಾಪನೆಗೆ ಅರ್ಹತೆ ಕುರಿತು ಸಹಕಾರ ಸಂಘಗಳ ನಿಬಂಧಕರು ಸುತ್ತೋಲೆ ಹೊರಡಿಸಿದ್ದಾರೆ. ನಬಾರ್ಡ್ ಮಾರ್ಗಸೂಚಿ, ಇಲಾಖೆ ಸುತ್ತೋಲೆ ಅನುಸರಿಸಿದರೆ ಸಾಕು. ಅಗತ್ಯಕ್ಕೆ ತಕ್ಕ ಪ್ಯಾಕ್ಸ್​ಗಳ ಸ್ಥಾಪನೆಗೆ ಅನುಮತಿ ದೊರೆಯುತ್ತದೆ. ಹೊಸ ಸದಸ್ಯರಿಗೆ ಸಾಲ-ಸವಲತ್ತು ದೊರೆತು, ಚಾಲ್ತಿ ಸಂಘಗಳು ಸದೃಢವಾಗಿ ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಬಲವರ್ಧನೆ ಉದ್ದೇಶ ಸಫಲವಾಗಲಿದೆ ಎಂದು ಸಹಕಾರಿ ಮೂಲಗಳು ಹೇಳಿವೆ.

ಸಹಕಾರ ವ್ಯವಸ್ಥೆ ಬಲಿ?: ಪ್ರಸ್ತುತ ಅಹಿತಕರ ಬೆಳವಣಿಗೆ, ಅನಾರೋಗ್ಯಕರ ಪೈಪೋಟಿಯು ಸಹಕಾರ ವ್ಯವಸ್ಥೆಯನ್ನು ಬಲಿ ಪಡೆಯುವ ಪ್ರಯತ್ನಕ್ಕೆ ಕೈಹಾಕಿದ ಆರೋಪಗಳಿವೆ. ನಿಯಮಾವಳಿಗಳು, ಸುತ್ತೋಲೆ ಒತ್ತಟ್ಟಿಗಿರಲಿ, ಆರ್ಥಿಕವಾಗಿ ಕಾರ್ಯಸಾಧು, ಪೂರ್ವಾಪರ ವಿವೇಚನೆಯಿಲ್ಲದೆ ನೂರಾರು ಹೊಸ ಸಂಘಗಳು ಸ್ಥಾಪನೆಯಾಗಿದ್ದು, ಕಾರ್ಯಾರಂಭಿಸಲು ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಗ್ರಾ.ಪಂ.ಗೊಂದು ಸಹಕಾರ ಸಂಘ ತೆರೆಯಬೇಕೆಂಬ ಪರಿಕಲ್ಪನೆ ಚೆನ್ನಾಗಿದೆ. ರೈತರು ಮತ್ತು ಚಾಲ್ತಿ ಸಂಘಕ್ಕೆ ಪೂರಕವಾದ ಕ್ರಮಗಳು ಅಗತ್ಯವಾಗಿದೆ.

ರಾಜಕೀಯ ದುರ್ಲಾಭಕ್ಕೆ ಸಹಕಾರ ಕ್ಷೇತ್ರ ಬಲಿ ಕೊಡುವ ರಣೋತ್ಸಾಹ ಕಂಡು ಬರುತ್ತಿದೆ. ಕೇಂದ್ರದ ಸೂಚನೆ ನೆಪವೊಡ್ಡಿ ಸ್ವಂತದ ಬೇಳೆ ಬೇಯಿಸಿಕೊಳ್ಳುವ ಸಂಚು ಹೂಡಿರುವ ಸಂಶಯವಿದೆ. ತಾಲೂಕು ಸಹಾಯಕ ನಿಬಂಧಕರು ಮತ್ತು ಜಿಲ್ಲಾ ಉಪ ನಿಬಂಧಕರ ಹಂತದಲ್ಲಿ ವ್ಯವಸ್ಥಿತವಾಗಿ ದಾಖಲೆಗಳನ್ನು ಸೃಷ್ಟಿಸಿ ಹೊಸ ಸಂಘಗಳಿಗೆ ಪರವಾನಗಿ ನೀಡಲಾಗುತ್ತಿದೆ ಎಂಬ ಆರೋಪವಿದೆ.

ಹಲವು ಜಿಲ್ಲೆಗಳ ವಸ್ತುಸ್ಥಿತಿ

  1. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಬಸರಕೋಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಚಂದ್ರಶೇಖರ ಸಿದ್ದಪ್ಪ ಮೇಟಿ ವಿರುದ್ಧ ಸೊಸೈಟಿ ದಾಖಲೆಗಳನ್ನು ದೋಚಿದ ಕುರಿತು ಪೊಲೀಸ್ ಠಾಣೆಯಲ್ಲಿ ಅಧ್ಯಕ್ಷ ಹೇಮರಡ್ಡಿ ಮೇಟಿ ಸೆ.22ರಂದು ದೂರು ದಾಖಲಿಸಿದ್ದಾರೆ. ಇದರಿಂದಾಗಿ ಸಂಘ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಿವೆ.
  2. ಶಿವಮೊಗ್ಗ ತಾಲೂಕಿನ ಜಾವಳ್ಳಿ ವ್ಯವಸಾಯ ಸೇವಾ ಸಂಘದ 2020ರಲ್ಲಿ ಕಾರ್ಯದರ್ಶಿಯಾಗಿದ್ದ ವ್ಯಕ್ತಿ ತನ್ನ ಪತ್ನಿ ಹಾಗೂ ಮತ್ತೊಬ್ಬರ ಹೆಸರಿಗೆ ತಲಾ 15 ಲಕ್ಷ ರೂ. ಅಡಕೆ ಅಡಮಾನ ಸಾಲ ಮಂಜೂರು ಮಾಡಿದ್ದಾರೆ. ವಾಸ್ತವದಲ್ಲಿ ಅಡಕೆಯನ್ನು ಅಡಮಾನ ಇಟ್ಟಿರಲೇ ಇಲ್ಲ. ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಪರಿಶೀಲನೆ ಸಂದರ್ಭ ಈ ಅಕ್ರಮ ಪತ್ತೆ ಹಚ್ಚಿದ್ದಾರೆ.
  3. ಬಳ್ಳಾರಿ ಜಿಲ್ಲೆಯಲ್ಲಿ 120 ಪ್ಯಾಕ್ಸ್​ಗಳಿವೆ. ಈ ಸೊಸೈಟಿಗಳ ಹೆಸರಿನಲ್ಲಿ ಪ್ರಭಾವಿಗಳು ನ್ಯಾಯಬೆಲೆ ಸಂಘ ನಡೆಸುತ್ತಿದ್ದು, ರೈತರಿಗೆ ಸಕಾಲಕ್ಕೆ ಸಾಲ ಸೌಲಭ್ಯವೂ ಸಿಗುತ್ತಿಲ್ಲ. ತಮಗೆ ಬೇಕಾದ ರೈತರ ಹೆಸರಿನಲ್ಲಿ ಸಾಲ ಕೊಟ್ಟು, ಹೊರಗೆ ಹೆಚ್ಚಿನ ಬಡ್ಡಿ ದರಕ್ಕೆ ಸಾಲ ನೀಡುವ ದೂರುಗಳಿವೆ.
  4. ಕೊಪ್ಪಳ ಜಿಲ್ಲೆಯಲ್ಲಿ 90ಕ್ಕೂ ಅಧಿಕ ಸೊಸೈಟಿಗಳಿವೆ. ಯಲಬುರ್ಗಾ ಪಿಕಾರ್ಡ್ ಬ್ಯಾಂಕ್ ಸೇರಿ ಕೆಲ ಬ್ಯಾಂಕ್​ಗಳಲ್ಲಿ ಅವ್ಯವಹಾರ ನಡೆದ ಆರೋಪಗಳಿವೆ. ಈ ಸಂಬಂಧ ಆಡಳಿತ ಮಂಡಳಿಯನ್ನು ಎರಡು ವರ್ಷಗಳ ಹಿಂದೆಯೇ ಸೂಪರ್ ಸೀಡ್ ಮಾಡಲಾಗಿದೆ.
  5. ಬೆಳಗಾವಿಯ ಜಿಲ್ಲೆಯಲ್ಲಿ ಬಿಡಿಸಿಸಿ ಬ್ಯಾಂಕ್​ನಲ್ಲಿ ನೋಂದಾಯಿಸಿಕೊಂಡ 1,122 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿವೆ. ಹಲವು ಪಿಕೆಪಿಎಸ್​ಗಳಲ್ಲಿ ಸಾಲ ವಿತರಣೆ ಹಾಗೂ ಸಾಲ ಮನ್ನಾಮಾಡುವುದರಲ್ಲೇ ಹೆಚ್ಚಿನ ಅಕ್ರಮ ನಡೆಯುತ್ತಿವೆ. ನಿಡಸೋಸಿ ಪ್ಯಾಕ್ಸ್ ಸಾಲ ಮನ್ನಾ ಮೊತ್ತದಲ್ಲಿ ಅರ್ಧ ರೈತರಿಂದಲೇ ತುಂಬಿಸಿಕೊಂಡ ಆರೋಪಗಳಿವೆ.

ಉದ್ದೇಶ ಒಳ್ಳೆಯದು, ಆದರೆ ಎಡಬಿಡಂಗಿ ಸ್ಥಿತಿ

ಹೊಸದನ್ನು ಸಾಧಿಸಿದ್ದೇವೆ ಎಂದು ತೋರಿಸುವ ಅತ್ಯುತ್ಸಾಹ, ಆತುರುತಾರವಾಗಿ ಹೊಸ ಸಂಘಗಳ ಸ್ಥಾಪನೆಯ ಪರಿಣಾಮ ಎಲ್ಲ ಪ್ಯಾಕ್ಸ್​ಗಳು ಎಡಬಿಡಂಗಿ ಸ್ಥಿತಿ ಎದುರಿಸಲಿವೆ. ಹಳೆಯ ಸಂಘಗಳ ವ್ಯಾಪ್ತಿ ಹೊಸ ಸಂಘಗಳಿಗೆ ಸೇರಲಿರುವ ಕಾರಣ ಈಗಾಗಲೆ ನೀಡಿರುವ ಕೋಟ್ಯಂತರ ರೂ. ಸಾಲ ವಸೂಲಿಯಾಗುವುದಿಲ್ಲ. ಹೊಸ ಸಂಘಗಳಿಗೆ ನಿಗದಿತ ಸಾಗುವಳಿ ಜಮೀನು, ಕುಟುಂಬ ಸದಸ್ಯರಿಲ್ಲದೆ ಸೊರಗಲಿದ್ದು, ಹೊಸ ಸದಸ್ಯರ ಕೈಗೆ ಸಾಲ ಇನ್ನಿತರ ಸವಲತ್ತು ಸಿಗುವುದು ಅನುಮಾನ.

ನಬಾರ್ಡ್​ನ ಮರು ಹಣಕಾಸು ಪಾಲು ಶೇ.40ಕ್ಕೆ ಇಳಿದಿದ್ದು, 20,000 ಕೋಟಿ ರೂ. ಬಂಡವಾಳ ಹೊಂದಿಸಲು ಏದುಸಿರು ಬಿಡುವಂತಾಗಿದೆ.

ಹೆಚ್ಚೆಚ್ಚು ರೈತರು ಸಹಕಾರ ವ್ಯವಸ್ಥೆಗೆ ಸೇರಬೇಕು, ಹೊಸ ಸದಸ್ಯರಿಗೆ ಸಾಲ ಸಿಗಬೇಕು ಎಂಬ ಉದ್ದೇಶ ಒಳ್ಳೆಯದು. ಆದರೆ ಅನುಷ್ಠಾನದ ಸಾಧ್ಯತೆ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ ಎನ್ನುವುದು ಸಹಕಾರ ವಲಯದ ವೇದನೆಯಾಗಿದೆ. ಅವ್ಯವಹಾರ, ಪ್ರಭಾವಿಗಳಿಗೆ ಮಣೆ ಇತ್ಯಾದಿ ಸಮಸ್ಯೆಗಳಿಂದ ಹಾಲಿ ಪ್ಯಾಕ್ಸ್​ಗಳನ್ನು ಮುಕ್ತಗೊಳಿಸಿ, ಪುನರುಜ್ಜೀವನದ ಬಳಿಕ ಹೊಸ ಪ್ರಯೋಗಕ್ಕೆ ಕೈಹಾಕಿದರೆ ಸಫಲವಾಗುತ್ತದೆ ಎನ್ನುವುದು ಸಹಕಾರಿ ಧುರೀಣರು ಒತ್ತಾಸೆಯಾಗಿದೆ.

ಸರ್ಕಾರಕ್ಕೆ ಹೈ ನೋಟಿಸ್

ಬೆಂಗಳೂರು: ಕರ್ನಾಟಕ ಲೋಕಾ ಯುಕ್ತ ಕಾಯ್ದೆ-1984ರ ಸೆಕ್ಷನ್ 2 (12) (ಜಿ) (ವಿ)ಗೆ ತಿದ್ದುಪಡಿ ಮಾಡಿ, ಸಹಕಾರ ಸಂಘಗಳನ್ನು ಲೋಕಾಯುಕ್ತ ವ್ಯಾಪ್ತಿಗೆ ತಂದಿರುವುದನ್ನು ಪ್ರಶ್ನಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಸರ್ಕಾರ ಹಾಗೂ ಲೋಕಾಯುಕ್ತಕ್ಕೆ ನೋಟಿಸ್ ನೀಡಿದೆ.

ಮೈಸೂರಿನ ‘ದಿ ಮುಸ್ಲಿಂ ಕೋ- ಅಪರೇಟಿವ್ ಬ್ಯಾಂಕ್ ಲಿ.’ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿದೆ.