ನ್ಯೂಸ್

ಬೆಡ್​​ರೂಮ್​ನಲ್ಲಿ ದುರಂತ ಸಾವಿಗೀಡಾದ ನವ ವಿವಾಹಿತ ದಂಪತಿ! ಅಂತ್ಯಕ್ರಿಯೆಯನ್ನು ತಡೆದ ಪೊಲೀಸರು

ಭುವನೇಶ್ವರ್​: ನವ ವಿವಾಹಿತ ದಂಪತಿ ಬೆಡ್​ರೂಮ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಒಡಿಶಾದ ಕಟಕ್​ ಜಿಲ್ಲೆಯ ಬಂಕಿ ಬ್ಲಾಕ್​ ವ್ಯಾಪ್ತಿಯಲ್ಲಿ ಬರುವ ಭೇದರಾಮಚಂದ್ರಾಪುರ ಗ್ರಾಮದಲ್ಲಿ ಗುರುವಾರ (ಆ.31) ನಡೆದಿದೆ.

ಮೃತ ದಂಪತಿಯನ್ನು ಧರಣಿಧರ್​ ಸಾಹು ಮತ್ತು ನಿರುಪಮಾ ಸಾಹು ಎಂದು ಗುರುತಿಸಲಾಗಿದೆ. ಇಬ್ಬರು 7 ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಧರಣಿಧರ್​, ಜೀವನೋಪಾಯಕ್ಕಾಗಿ ಭುವನೇಶ್ವರದ ಸ್ವೀಟ್​ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದರು. ಅನೇಕ ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಅದರಂತೆಯೇ ಬುಧವಾರ ಊರಿಗೆ ಬಂದಿದ್ದ. ಆದರೆ, ಗುರುವಾರ ಬೆಳಗ್ಗೆ ಕುಟುಂಬಸ್ಥರು ಎದ್ದು ನೋಡಿದಾಗ ಬೆಡ್​ರೂಮ್​ನ ಸೀಲಿಂಗ್​ ಫ್ಯಾನ್​ಗೆ ಧರಣಿಧರ್​ ಮತ್ತು ನಿರುಪಮಾ ನೇಣು ಬಿಗಿದುಕೊಂಡಿದ್ದಾರೆ.

ಇದಾದ ಬಳಿಕ ಕುಟುಂಬಸ್ಥರು ಇಬ್ಬರ ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ಮಾಡಿ ಮುಗಿಸಲು ಪ್ರಯತ್ನಿಸಿದರು. ಆದರೆ, ಈ ವಿಚಾರ ಸ್ಥಳೀಯ ಪೊಲೀಸರಿಗೆ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಂತ್ಯಕ್ರಿಯೆಯನ್ನು ತಡೆದಿದ್ದಾರೆ ಮತ್ತು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ಪಡೆದುಕೊಂಡರು.

ಸಾವಿಗೆ ನಿಖರವಾದ ಕಾರಣ ಏನೆಂಬುದು ಇನ್ನು ತಿಳಿದಿಲ್ಲ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಕಾರಣ ತಿಳಿಯಬಹುದು. ಪ್ರಾಥಮಿಕ ತನಿಖೆಯ ಪ್ರಕಾರ ಕೌಟುಂಬಿಕ ಸಮಸ್ಯೆಗಳಿಂದಾಗಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)