ನ್ಯೂಸ್

ಹೊಸ ವರ್ಷಾಚರಣೆ: ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ ಖಾಕಿ

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಮಾದಕ ವಸ್ತು ಮಾರಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಡ್ರಗ್ಸ್ ಪೂರೈಕೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು, ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ರೌಡಿಶೀಟರ್‌ಗಳ ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ನಶೆಮುಕ್ತವಾಗಿಸುವ ನಿಟ್ಟಿನಲ್ಲಿ ನಗರದ ಎಲ್ಲ ಪೊಲೀಸ್ ಠಾಣೆ ವಿಭಾಗದಲ್ಲಿ ನ.೨೯ ಹಾಗೂ ೩೦ರಂದು ವಿಶೇಷ ಕಾರ್ಯಾಚರಣೆ ನಡೆಸಿ ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಪರಿಶೀಲನೆ, ಪಬ್, ವೈನ್ಸ್ ಸ್ಟೋರ್, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಹೇಳಿದರು.

ಹಲವು ಆರೋಪಿಗಳ ವಿಚಾರಣೆ:

ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾದ ೩೮೦ ಆರೋಪಿಗಳ ವಿಚಾರಣೆ ನಡೆಸಲಾಯಿತು. ಈ ವೇಳೆ ಎನ್‌ಡಿಪಿಎಸ್ ಕಾಯ್ದೆ ಅಡಿ ೧ ಪ್ರಕರಣ ದಾಖಲಿಸಿ, ೪೦ ಸಾವಿರ ರೂ. ಮೌಲ್ಯದ ೧ ಕೆ.ಜಿ. ೧೦೦ ಗ್ರಾಂ ತೂಕದ ಗಾಂಜಾ ವಶಕ್ಕೆಪಡೆಯಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಹಾಗೆಯೇ ೧೬೩೩ ಬಾರ್ ಹಾಗೂ ರೆಸ್ಟೋರೆಂಟ್‌ಗಳು, ೧೦೨೦ ವಸತಿಗೃಹಗಳು ಪರಿಶೀಲಿಸಿದ್ದು, ೧,೨೩೩ ರೌಡಿಶೀಟರ್‌ಗಳು, ೧೧೧೩ ಹಳೇ ಆರೋಪಿಗಳ ವಿಚಾರಣೆ ನಡೆಸಲಾಗಿದೆ. ಈ ವೇಳೆ ಬಿಎನ್‌ಎಸ್ ಅಡಿ ಒಂದು, ಕೊಟ್ಪಾ ಕಾಯ್ದೆ ಅಡಿ ೨೯, ವಿಶೇಷ ಕಾಯ್ದೆ ೧ ,ವಿದೇಶಿಯರ ಕಾಯ್ದೆ ಅಡಿ ೩ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದರು.

೬ ಮಂದಿ ವಿದೇಶಿ ಮಹಿಳೆಯರ ರಕ್ಷಣೆ:

ಪರಿಶೀಲನೆಯ ಸಂದರ್ಭದಲ್ಲಿ ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಆರು ಮಂದಿ ವಿದೇಶಿ ಮಹಿಳೆಯರನ್ನು ರಕ್ಷಿಸಲಾಗಿದೆ. ಸುಮಾರು ೪೧೧ ವಿದೇಶಿಗರನ್ನು ಪರಿಶೀಲಿಸಲಾಗಿದ್ದು, ವೀಸಾ ಅವಧಿ ಮೀರಿ ನಗರದಲ್ಲಿ ವಾಸವಾಗಿದ್ದ ೨೯ ಜನರನ್ನು ವಿದೇಶಿಗರ ಪ್ರಾದೇಶಿಕ ನೋಂದಣಿ ಕೇಂದ್ರದ ಅಧಿಕಾರಿಗಳ ಮುಂದೆ ಹಾಜರುಪಡಿಸಿ ಅವರನ್ನು ವಾಪಸ್ ಕಳುಹಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದರ ಭಾಗವಾಗಿ ನ.೩೦ರಂದು ನಗರದಲ್ಲಿನ ೪೬೦ ಶಾಲಾ-ಕಾಲೇಜುಗಳು ಮತ್ತು ೩೦೨ ಹಾಸ್ಟೆಲ್ಗಳಿಗೆ ಭೇಟಿ ನೀಡಿ ೬೧,೩೯೮ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಸಲಹೆ, ಸೂಚನೆ ನೀಡಲಾಗಿದೆ. ಸೈಬರ್ ಅಪರಾಧ ಮತ್ತು ಕಾನೂನುಗಳು ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ನುಡಿದರು.

ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿದ್ದ ೧೨ ಮಹಿಳೆಯರನ್ನು ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಬೇರೆ ಬೇರೆ ವಯೋಮಾನದ ೧೬ ಮಕ್ಕಳನ್ನು ರಕ್ಷಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಎದುರು ಹಾಜರು ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.