ದುಬೈ: ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಎಂಬುದು ಗೊತ್ತೆ ಇದೆ. ಈಗ ಪ್ರಪಂಚದ ಎರಡನೇ ಅತಿ ಎತ್ತರದ ಕಟ್ಟಡ ನಿರ್ಮಾಣವಾಗುತ್ತಿದೆ. ದುಬೈನಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟದ ಹೆಸರು ಬುರ್ಜ್ ಅಜೀಜಿ. ಈ ಕಟ್ಟಡವನ್ನು ರಿಯಲ್ ಎಸ್ಟೇಟ್ ಸಂಸ್ಥೆ ಅಜೀಜಿ ಡೆವಲಪ್ಮೆಂಟ್ ನಿರ್ಮಿಸುತ್ತಿರುವುದರಿಂದ ಆ ಕಂಪನಿಯ ಹೆಸರನ್ನೇ ಕಟ್ಟಡಕ್ಕೆ ಹೆಸರಿಸಲಾಗಿದೆ. ಈ ವರ್ಷದ ಜನವರಿಯಲ್ಲಿ ಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು. ಆದರೆ ಆ ಸಮಯದಲ್ಲಿ ಕಟ್ಟಡದ ಎತ್ತರದ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಿಲಿಲ್ಲ. ಇದೀಗ ಅದರ ಎತ್ತರವನ್ನು ಅಧಿಕಾರಿಗಳು ಅನುಮೋದಿಸಿದ್ದು ಕಂಪನಿಯಿಂದ ಅಧಿಕೃತವಾಗಿ ಘೋಷಿಸಲಾಗಿದೆ.
ಈ ಕಟ್ಟಡವು ದುಬೈನ ಒಂದು ಕಟ್ಟಡವನ್ನು ಹೊರತುಪಡಿಸಿ ಉಳಿದೆಲ್ಲ ಕಟ್ಟಡಗಳಿಗಿಂತ ಎತ್ತರವಾಗಿರುದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಅದರ ಎತ್ತರವು ಸುಮಾರು 725 ಮೀಟರ್ ಆಗಿರುತ್ತದೆ. ಈ ಕಟ್ಟಡಕ್ಕೆ ನಾವು ಎರಡು ವಿನ್ಯಾಸಗಳನ್ನು ಹೊಂದಿದ್ದೇವೆ. ಈ ಪೈಕಿ ಒಂದು 526 ಮೀಟರ್‌ವರೆಗೆ ನಿರ್ಮಿಸಲು ಹಾಗೂ ಮತ್ತೊಂದನ್ನು 725 ಮೀಟರ್‌ವರೆಗೆ ನಿರ್ಮಿಸಲು ಅನುಮೋದನೆ ನೀಡಿದ್ದಾಗಿ ಕಂಪನಿಯ ಮಾಲೀಕ ಮಿರ್ವೈಸ್ ಅಜೀಜಿ ತಿಳಿಸಿದ್ದಾರೆ. ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾದ ಎತ್ತರವು ಸುಮಾರು 828 ಮೀಟರ್ ಇದೆ.
ಈ ಕಟ್ಟಡವು ಪ್ರಪಂಚದಾದ್ಯಂತದ ಎಲ್ಲಾ ಸೌಲಭ್ಯಗಳನ್ನು ಹೊಂದಿರುತ್ತದೆ. 131-ಅಂತಸ್ತಿನ ಕಟ್ಟಡವು ಅಪಾರ್ಟ್‌ಮೆಂಟ್‌ಗಳು, ಎಲ್ಲಾ ಸೂಟ್ ಸೆವೆನ್-ಸ್ಟಾರ್ ಹೋಟೆಲ್, ಏಳು ಅಂತಸ್ತಿನ ವರ್ಟಿಕಲ್ ಶಾಪಿಂಗ್ ಮಾಲ್ ಅನ್ನು ಹೊಂದಿರುತ್ತದೆ. ಇದಲ್ಲದೇ ಇಲ್ಲಿಗೆ ಬರುವ ಜನರಿಗೆ ಪ್ರಪಂಚದಾದ್ಯಂತದ ವಸ್ತುಗಳು ಲಭ್ಯವಾಗಲಿವೆ. ಈ ಕಟ್ಟಡವು ಅದರ ಐಷಾರಾಮಿ ದೃಷ್ಟಿಯಿಂದ ಬುರ್ಜ್ ಖಲೀಫಾಕ್ಕಿಂತ ಕಡಿಮೆಯಿಲ್ಲ ಎಂದು ಅವರು ಹೇಳಿದರು.
ದುಬೈನ ಶೇಖ್ ಜಾಯೆದ್ ರಸ್ತೆಯಲ್ಲಿರುವ ಬುರ್ಜ್ ಖಲೀಫಾದಿಂದ ಬುರ್ಜ್ ಅಜೀಜಿಯ ನಡುವೆ ಕೇವಲ 2 ಮೈಲಿಗಳ ಅಂತರವಿದೆ. ಪ್ರಸ್ತುತ ಬುರ್ಜ್ ಖಲೀಫಾ ನಂತರ ದುಬೈನ ಎರಡನೇ ಅತಿ ಎತ್ತರದ ಕಟ್ಟಡ ಮರೀನಾ ಎಂದು ಹೇಳಲಾಗುತ್ತಿದೆ ಇದರ ಎತ್ತರ ಸುಮಾರು 1394 ಅಡಿ ಆಗಿದೆ.
ಕಟ್ಟಡವು ವಿಶ್ವದ ಅತಿ ಎತ್ತರದ ಹೋಟೆಲ್ ಲಾಬಿ, ನೈಟ್ಕ್ಲಬ್ ಮತ್ತು ವೀಕ್ಷಣಾ ಡೆಕ್ ಸೇರಿದಂತೆ ಟವರ್‌ನ 118ನೇ ಮಹಡಿಯಲ್ಲಿರುವ ನಗರದ ಅತಿ ಎತ್ತರದ ಹೋಟೆಲ್ ಕೊಠಡಿಗಳು ದಾಖಲೆಗಳನ್ನು ನಿರ್ಮಿಸುವ ನಿರೀಕ್ಷೆಯಿದೆ. ಕಟ್ಟಡವು ದುಬೈನ ಅತಿ ಎತ್ತರದ ರೆಸ್ಟೋರೆಂಟ್‌ಗೆ ನೆಲೆಯಾಗಿದೆ. ಇದು ವಿಶ್ವದ ಅತಿ ಎತ್ತರದ ಇನ್ಫಿನಿಟಿ ಪೂಲ್, ಫ್ಲವರ್ ಗಾರ್ಡೆನ್ ಇರಲಿದೆ ಎಂದು ಕಟ್ಟಡ ನಿರ್ಮಾಣ ಸಂಸ್ಥೆ ತಿಳಿಸಿದೆ. ಬುರ್ಜ್ ಅಜೀಜಿ 2028ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಅಪಾರ್ಟ್ಮೆಂಟ್ ಮಾರಾಟವು ಫೆಬ್ರವರಿ 2025ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ.(ಏಜೆನ್ಸೀಸ್)