ನ್ಯೂಸ್

ದೆಹಲಿ ಸಿಎಂ ಮೇಲಿನ ದಾಳಿಗೆ ಹೊಸ ತಿರುವು: ಆರೋಪಿ ತಾಯಿಯ ಹೇಳಿಕೆ ಕೇಳಿ ದಂಗಾದ ಪೊಲೀಸರು! Delhi CM

Delhi CM : ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಇಂದು (ಆಗಸ್ಟ್​ 20) ಬೆಳಗ್ಗೆ ನಡೆದ ದಾಳಿ ಹೊಸ ತಿರುವು ಪಡೆದುಕೊಂಡಿದೆ. ಆರೋಪಿಯನ್ನು ಗುಜರಾತ್‌ನ ರಾಜೇಶ್ ಸಕಾರಿಯಾ (41) ಎಂದು ಗುರುತಿಸಲಾಗಿದೆ. ಆತ ದಾಳಿ ಮಾಡಿದ್ದೇಕೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಇದೇ ಸಂದರ್ಭದಲ್ಲಿ ಪೊಲೀಸರು ರಾಜ್‌ಕೋಟ್‌ನಲ್ಲಿರುವ ರಾಜೇಶ್ ಮನೆಗೆ ತಲುಪಿ ಆರೋಪಿಯ ಕುಟುಂಬ ಸದಸ್ಯರನ್ನು ವಿಚಾರಿಸಿದಾಗ ಆತನ ತಾಯಿ ನೀಡಿದ ಉತ್ತರ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ರಾಜೇಶ್ ಆ ರೀತಿ ಮಾಡಿದ್ದೇಕೆ ಅನ್ನೋದು ನಮಗೆ ತಿಳಿದಿಲ್ಲ. ಅವನಿಗೆ ನಾಯಿಗಳು ಅಂದರೆ ತುಂಬಾ ಇಷ್ಟ. ಬೀದಿ ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಕಂಗಾಲಾಗಿದ್ದ. ಬಹುಶಃ ತೀರ್ಪಿನ ನಿರಾಸೆಯಿಂದಲೇ ಆತ ದಾಳಿ ಮಾಡಿರಬಹುದು ಎಂದು ಹೇಳಿದ್ದಾರೆ. ಅಂದಹಾಗೆ, ರಾಜೇಶ್ ನಾಯಿ ಪ್ರಿಯ ಎಂದು ಸ್ಥಳೀಯರು ಕೂಡ ದೃಢಪಡಿಸಿದ್ದಾರೆ. ಆದಾಗ್ಯೂ, ರಾಜೇಶ್ ತನ್ನ ಬಂಧಿತ ಸಂಬಂಧಿಯನ್ನು ಬಿಡುಗಡೆ ಮಾಡಲು ದೆಹಲಿ ಸಿಎಂ ಸಹಾಯವನ್ನು ಕೋರಿದ್ದರು ಮತ್ತು ಅದೇ ವಿಚಾರಕ್ಕೆ ಆಕೆಯ ಮೇಲೆ ದಾಳಿ ಮಾಡಿರಬಹುದು ಎಂದು ಇತರರು ಹೇಳುತ್ತಾರೆ. ಆದರೆ, ಆ ವ್ಯಕ್ತಿ ಸಿಎಂ ಮೇಲೆ ದಾಳಿ ಮಾಡಲು ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾಜೇಶ್ ಅವರು ತಮ್ಮ ಕೈಯಲ್ಲಿ ಕೆಲವು ಕಾಗದಗಳನ್ನು ಹಿಡಿದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಸಂಪರ್ಕಿಸಿದರು. ಸಿಎಂ ಮಾತನಾಡುತ್ತಿರುವಾಗ, ಆತ ಕೂಗಾಡಿ, ಅವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ಈ ವೇಳೆ ರಾಜೇಶ್ ಕುಡಿದು ಬಂದಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ರಸ್ತುತ ರಾಜೇಶ್​ ಪೊಲೀಸರ ವಶದಲ್ಲಿದ್ದಾನೆ.

ನಾಯಿಗಳ ಬಗ್ಗೆ ಸುಪ್ರೀಂ ತೀರ್ಪು ಏನು?

ದೆಹಲಿ ಮತ್ತು NCR ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳು ಮತ್ತು ರೇಬೀಸ್ ಸಾವುಗಳ ಕುರಿತಾದ ಮಾಧ್ಯಮ ವರದಿಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆಯನ್ನು ನಡೆಸಿತು. ಈ ಸಂದರ್ಭದಲ್ಲಿ, ಆಗಸ್ಟ್ 11 ರಂದು, ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಎಲ್ಲಾ ಬೀದಿ ನಾಯಿಗಳನ್ನು ಎಂಟು ವಾರಗಳ ಒಳಗೆ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ಆದೇಶಿಸಿತು. ಪ್ರಾಣಿ ಪ್ರಿಯರು ಅವುಗಳನ್ನು ತಡೆಯಲು ಪ್ರಯತ್ನಿಸಿದರೆ ಪರಿಣಾಮಗಳು ತೀವ್ರವಾಗಿರುತ್ತದೆ ಎಂದು ಎಚ್ಚರಿಸಿತು. ಅದೇ ಸಮಯದಲ್ಲಿ ಪ್ರಾಣಿ ಪ್ರಿಯರ ಆಕ್ಷೇಪಣೆಯಿಂದಾಗಿ ಈ ತೀರ್ಪು ದೇಶಾದ್ಯಂತ ಚರ್ಚೆಯ ವಿಷಯವಾಯಿತು. ಈ ಮಧ್ಯೆ ಕೋರ್ಟ್​ ನೀಡಿದ ಆದೇಶಗಳನ್ನು ತಡೆಹಿಡಿಯಲು ಮತ್ತೊಂದು ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಕುರಿತು ವಿಚಾರಣೆಯನ್ನು ನಡೆಸಿದ ದೊಡ್ಡ ಪೀಠವು ಸದ್ಯ ತೀರ್ಪನ್ನು ಕಾಯ್ದಿರಿಸಿದೆ.

ಈ ತೀರ್ಪಿನ ಬಗ್ಗೆ ದೆಹಲಿ ಸರ್ಕಾರ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದಾಗ್ಯೂ, ಸಿಎಂ ರೇಖಾ ಗುಪ್ತಾ ಪ್ರತಿಕ್ರಿಯಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶಗಳು ಬರುವವರೆಗೆ ಯಾವುದೇ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಾಣಿ ಪ್ರಿಯರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ. ಮತ್ತೊಂದೆಡೆ, ಸುಪ್ರೀಂ ಕೋರ್ಟ್ ಆದೇಶಗಳನ್ನು ಜಾರಿಗೆ ತರುವುದು ಕಷ್ಟ ಎಂದು ದೆಹಲಿ ಆಡಳಿತ ಹೇಳುತ್ತಿದೆ. ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮತ್ತು ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ದೆಹಲಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಬೀದಿ ನಾಯಿಗಳನ್ನು ಸ್ಥಳಾಂತರಿಸುವುದು, ಅವುಗಳಿಗೆ ಆಶ್ರಯಗಳನ್ನು ಸ್ಥಾಪಿಸುವುದು ಮತ್ತು ಅವುಗಳನ್ನು ನಿರ್ವಹಿಸುವುದು ಕಷ್ಟ. ಒಟ್ಟು ವೆಚ್ಚ ವರ್ಷಕ್ಕೆ 15 ಸಾವಿರ ಕೋಟಿ ರೂ. ಖರ್ಚಾಗುತ್ತದೆ ಎಂದಿದ್ದಾರೆ.

ಸಿಎಂ ರೇಖಾ ಅವರ ಮೇಲಿನ ಈ ದಾಳಿಯು ತೀವ್ರ ರಾಜಕೀಯ ಟೀಕೆಗೆ ಗುರಿಯಾಗಿದೆ. ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದರ್ ಯಾದವ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಘಟನೆ. ಮುಖ್ಯಮಂತ್ರಿಗೆ ರಕ್ಷಣೆ ಇಲ್ಲದಿದ್ದರೆ, ಸಾಮಾನ್ಯ ಮಹಿಳೆಯರ ಭದ್ರತಾ ಪರಿಸ್ಥಿತಿ ಏನು? ಎಂದು ಪ್ರಶ್ನಿಸಿದರು. ಈ ದಾಳಿಯು ರಾಜಧಾನಿಯಲ್ಲಿ ಮಹಿಳೆಯರ ಭದ್ರತೆ ಎಷ್ಟು ದಯನೀಯವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಅದೇ ರೀತಿ, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಕೂಡ ದಾಳಿಯನ್ನು ಖಂಡಿಸಿದ್ದಾರೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. (ಏಜೆನ್ಸೀಸ್​)