ನ್ಯೂಸ್

ಯೋಜನೆಗಳಿಗೆ ತ್ವರಿತ ಅನುಮೋದನೆಗೆ ಹೊಸ ಸಾಫ್ಟ್‌ವೇರ್: ಸಚಿವ ಎಂ.ಬಿ.ಪಾಟೀಲ

ಬೆಂಗಳೂರು: ಏಕಗವಾಕ್ಷಿ ವ್ಯವಸ್ಥೆಯಡಿ ಒಪ್ಪಿಗೆ ಪಡೆದ ಕೈಗಾರಿಕಾ ಯೋಜನೆಗಳಿಗೆ ಗರಿಷ್ಠ 100 ದಿನಗಳೊಳಗೆ ಎಲ್ಲ ಅನುಮೋದನೆಗಳನ್ನು ನೀಡಲು ಹೊಸ ತಂತ್ರಾಂಶ (ಸಾಫ್ಟ್‌ವೇರ್)ವನ್ನು ಮೈಕ್ರೋಸಾಫ್ಟ್‌ ಕಂಪನಿಯ ನೆರವಿನಿಂದ ಅಭಿವೃದ್ಧಿಪಡಿಸಲಾಗಿದೆ ಎಂದು ಬೃಹತ್ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದರು.

ಕ್ಷಿಪ್ರಗತಿಗತಿಯಲ್ಲಿ ಯೋಜನೆಗಳಿಗೆ ಅನುಮೋದನೆ ಸಂಬಂಧ ಮೈಕ್ರೋಸ್‌ಟಾ ಕಂಪನಿ ಪ್ರತಿನಿಧಿಗಳು ನೀಡಿದ ಪ್ರಾತ್ಯಕ್ಷಿಕೆಯನ್ನು ಖನಿಜ ಭವನದಲ್ಲಿ ಸೋಮವಾರ ವೀಕ್ಷಿಸಿದ ನಂತರ ಪ್ರತಿಕ್ರಿಯಿಸಿದ ಅವರು,ಫೆಬ್ರವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಹೊಸ ಸಾಫ್ಟ್‌ವೇರ್ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.

ನೆರೆಹೊರೆಯ ಕೆಲವು ರಾಜ್ಯಗಳಲ್ಲಿ ಕೈಗಾರಿಕಾ ಹೂಡಿಕೆ ಯೋಜನೆಗಳಿಗೆ 60-70 ದಿನಗಳಲ್ಲಿ ಪ್ರತಿಯೊಂದು ಅನುಮೋದನೆ ನೀಡಲಾಗುತ್ತಿದೆ. ಆದರೆ ನಮ್ಮಲ್ಲಿ ಸರಾಸರಿ 300 ದಿನಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, 60-70 ದಿನಗಳಿಗೆ ಇಳಿಸುವ ಗುರಿಯಿದೆ ಎಂದರು.

ಸಾಫ್ಟ್‌ವೇರ್ ನಿಂದ ಸುಗಮ

ಕೈಗಾರಿಕಾ ಯೋಜನೆಗಳಿಗೆ ಅಗ್ನಿಶಾಮಕ, ಕಾನೂನು, ಅರಣ್ಯ ಮುಂತಾದ 33 ಇಲಾಖೆಗಳ ಅನುಮೋದನೆ ಬೇಕು. ಜತೆಗೆ 147 ಬಗೆಯ ಸೇವೆಗಳಿವೆ. ಇವನ್ನೆಲ್ಲ ಒಂದೇ ಕಡೆ ತಂದು ಪ್ರಕ್ರಿಯೆ ಸುಗಮಗೊಳಿಸಲು ಈ ಸಾಫ್ಟ್‌ವೇರ್‌ನಿಂದ ಸಾಧ್ಯವಾಗಲಿದೆ ಎಂದು ಹೇಳಿದರು.

ಏಕಗವಾಕ್ಷಿ ವ್ಯವಸ್ಥೆಯ ಬಗ್ಗೆ ಸಂಪುಟದ ಸಹೋದ್ಯೋಗಿಗಳು ಹಾಗೂ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪರಿಚಯಿಸಲಾಗುವುದು. ಆ ಮೂಲಕ ಎಲ್ಲ ಇಲಾಖೆಗಳು ತಮ್ಮ ವ್ಯಾಪ್ತಿಯ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಕೋರಲಾಗುವುದು ಎಂದು ಎಂ.ಬಿ.ಪಾಟೀಲ ವಿವರಿಸಿದರು.

ಕೃತಕ ಬುದ್ಧಿಮತ್ತೆ ಆಸರೆ

ಜತೆಗೆ ಉದ್ಯಮಿಗಳು ಕೂಡ ಕೂತಲ್ಲೇ ತಮ್ಮ ಯೋಜನೆ ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೂ ನೆರವಾಗಲಿದೆ. ಇದಕ್ಕಾಗಿ ವಿಶೇಷ ವೆಬ್‌ಸೈಟ್ ವಿನ್ಯಾಸ ಮಾಡಿದ್ದು, ಕನ್ನಡ, ಇಂಗ್ಲಿಷ್ ಹಾಗೂ ವಿಶ್ವದ ಎಲ್ಲ ಪ್ರಮುಖ ಭಾಷೆಗಳಲ್ಲೂ ಮಾಹಿತಿ ಲಭ್ಯವಾಗಲಿದೆ.

ಕೃತಕ ಬುದ್ಧಿಮತ್ತೆಯ ನೆರವು ಕೂಡ ಪಡೆಯಲಾಗಿದೆ. ಧ್ವನಿ ಮಾಧ್ಯಮದಲ್ಲೂ ಕೂಡ ಉದ್ಯಮಿಗಳು ತಮ್ಮಿಚ್ಛೆಯ ಭಾಷೆಯಲ್ಲಿ ಮಾಹಿತಿ ಪಡೆದು ಕೊಳ್ಳಬಹುದು. ಇಂತಹ ಅತ್ಯಾಧುನಿಕ ಸೌಲಭ್ಯ ಈ ಉಪಕ್ರಮದಡಿ ಇರಲಿದೆ. ’ಉಮಾ’ (ಉದ್ಯೋಗ ಮಿತ್ರ ಅಸಿಸ್ಟೆಂಟ್) ಎಂದು ಹೆಸರಿಡಲಾಗಿದೆ ಎಂದು ಎಂ.ಬಿ.ಪಾಟೀಲ ಹೇಳಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಆಯುಕ್ತ ಡಾ.ಮಹೇಶ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಹಾಗೂ ಮೈಕ್ರೋಸಾಫ್ಟ್‌ ಯೋಜನಾ ನಿರ್ದೇಶಕ ಪುನೀತ್ ಇದ್ದರು.