ಗುಜರಾತ್ ವಿಶ್ವವಿದ್ಯಾಲಯ ಹಾಸ್ಟೆಲ್‌ಗಳಲ್ಲಿ 'ಆ್ಯಂಟಿ ಸೂಸೈಡ್' ಫ್ಯಾನ್‌ಗಳ ಅಳವಡಿಕೆ 
ನ್ಯೂಸ್

ವಿದ್ಯಾರ್ಥಿಗಳ ಜೀವ ಉಳಿಸಲು ಹೊಸ ಪ್ಲ್ಯಾನ್: ಗುಜರಾತ್ ವಿವಿ ಹಾಸ್ಟೆಲ್‌ನಲ್ಲಿ 'ಆ್ಯಂಟಿ ಸೂಸೈಡ್' ಫ್ಯಾನ್‌ಗಳ ಅಳವಡಿಕೆ | Anti Suicide Fan

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ ಹಾಗೂ ಆತ್ಮಹತ್ಯೆ ತಡೆಯಲು ಗುಜರಾತ್‌ನ ಸೂರತ್‌ನಲ್ಲಿರುವ ವಿಎನ್‌ಎಸ್‌ಜಿಯು ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿ 'ಆ್ಯಂಟಿ ಸೂಸೈಡ್' ಸ್ಪ್ರಿಂಗ್ ಫ್ಯಾನ್‌ಗಳನ್ನು ಅಳವಡಿಸಲಾಗಿದೆ

Anti suicide spring ceiling fan: ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ ಹಾಗೂ ಆತ್ಮಹತ್ಯೆ ಘಟನೆಗಳಿಗೆ ತಡೆ ಹಾಕಲು ಗುಜರಾತ್‌ನ ಸೂರತ್‌ನಲ್ಲಿರುವ ವೀರ್ ನರ್ಮದ್ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯ (VNSGU) ಮಹತ್ವದ ಕ್ರಮ ಕೈಗೊಂಡಿದ್ದು, ಬಾಲಕರು ಹಾಗೂ ಬಾಲಕಿಯರ ಹಾಸ್ಟೆಲ್ ಕೊಠಡಿಗಳಲ್ಲಿ ವಿಶೇಷ 'ಆ್ಯಂಟಿ ಸೂಸೈಡ್' ಸೀಲಿಂಗ್ ಫ್ಯಾನ್‌ಗಳನ್ನು ಅಳವಡಿಸಿದೆ.

ಈ ವಿಶೇಷ ಫ್ಯಾನ್‌ಗಳಲ್ಲಿ ಸ್ಪ್ರಿಂಗ್ ಟೆಕ್ನಾಲಜಿ ಬಳಸಲಾಗಿದೆ. ಫ್ಯಾನ್ ಮೇಲೆ ಅಂದಾಜು 10 ಕೆಜಿಗಿಂತ ಹೆಚ್ಚು ತೂಕ ಅಥವಾ ಒತ್ತಡ ಬಿದ್ದರೆ ಸಾಕು, ತಕ್ಷಣವೇ ಅದರೊಳಗಿರೋ ಸ್ಪ್ರಿಂಗ್ ಮುಕ್ತವಾಗಿ ಫ್ಯಾನ್ ಕೆಳಗೆ ಜಾರುತ್ತದೆ. ಅಷ್ಟೇ ಅಲ್ಲ, ಅದೇ ಸಮಯದಲ್ಲಿ ಅದರ ಕರೆಂಟ್ ಕನೆಕ್ಷನ್ ಕೂಡ ಕಟ್ ಆಗುತ್ತದೆ. ಇದರಿಂದಾಗಿ ಫ್ಯಾನ್ ಯಾವುದೇ ವ್ಯಕ್ತಿಯ ತೂಕವನ್ನು ತಂಗಲು ಸಾಧ್ಯವಾಗದೆ, ನೇಣು ಬಿಗಿದುಕೊಳ್ಳುವ ಪ್ರಯತ್ನ ವಿಫಲವಾಗಿ ಜೀವ ಉಳಿಯುತ್ತದೆ.

ಲೈವ್ ಡೆಮೊ ನೀಡಿದ ಕುಲಪತಿಗಳು

ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕಿಶೋರ್‌ಸಿನ್ಹಾ ಚಾವ್ಡಾ ಅವರೇ ಖುದ್ದಾಗಿ ಹಾಸ್ಟೆಲ್ ಕೊಠಡಿಗೆ ಭೇಟಿ ನೀಡಿ, ಫ್ಯಾನ್‌ಗೆ ಬೆಡ್‌ಶೀಟ್ ಕಟ್ಟಿ ಕೆಳಗೆ ಜಗ್ಗುವ ಮೂಲಕ ಇದು ಹೇಗೆ ಕೆಲಸ ಮಾಡುತ್ತದೆ ಅನ್ನೋದನ್ನು ಮಾಧ್ಯಮಗಳ ಮುಂದೆ ಲೈವ್ ಆಗಿ ತೋರಿಸಿದ್ದಾರೆ.

ಕೌನ್ಸಿಲಿಂಗ್ ಕೇಂದ್ರಗಳಿಂದ ಸಲಹೆ

ಒಂದು ಫ್ಯಾನ್‌ಗೆ 1,500 ರೂಪಾಯಿ ಖರ್ಚಾಗಿದ್ದು, ಆಡಳಿತ ಮಂಡಳಿಯು ಹಾಸ್ಟೆಲ್‌ಗಳ 388 ಕೊಠಡಿಗಳಲ್ಲಿ ಇವುಗಳನ್ನು ಫಿಕ್ಸ್ ಮಾಡಿದೆ. ಕೇಂದ್ರ ಮತ್ತು ಗುಜರಾತ್ ಸರ್ಕಾರದ ಮಾರ್ಗಸೂಚಿ ಹಾಗೂ ಕೌನ್ಸಿಲಿಂಗ್ ಕೇಂದ್ರಗಳ ಸಲಹೆಯಂತೆ ಈ ಹೆಜ್ಜೆ ಇಡಲಾಗಿದ್ದು, ವಿಎನ್‌ಎಸ್‌ಜಿಯು ಕೈಗೊಂಡಿರುವ ಈ ಸುರಕ್ಷತಾ ಕ್ರಮ ಇಡೀ ರಾಜ್ಯದ ಇತರ ಕಾಲೇಜುಗಳಿಗೆ ಮಾದರಿಯಾಗಿದೆ.

ಇದನ್ನೂ ಓದಿ: Cyclone Warning: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಅಕ್ಟೋಬರ್ 26ಕ್ಕೆ ಚಂಡಮಾರುತದ ಭೀತಿ, ಆಂಧ್ರ-ಒಡಿಶಾ ಕರಾವಳಿಗೆ ಹೈ ಅಲರ್ಟ್!

ಫ್ಯಾನ್ ಅಳವಡಿಸುವುದು ಸಮಸ್ಯೆಗೆ ಪರಹಾರವಲ್ಲ

ಫ್ಯಾನ್ ಅಳವಡಿಸೋದು ಒಂದೇ ಸಮಸ್ಯೆಗೆ ಪರಿಹಾರ ಅಲ್ಲ ಅನ್ನೋ ಮಾತುಗಳೂ ಕೇಳಿಬರುತ್ತಿವೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, "ಸ್ಪ್ರಿಂಗ್ ಫ್ಯಾನ್ ಹಾಕೋದ್ರಿಂದ ಸಮಸ್ಯೆ ಬಗೆಹರಿಯಲ್ಲ, ಬದಲಿಗೆ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಯೋಚನೆ ಬಾರದಂತೆ ನೋಡಿಕೊಳ್ಳಿ. ಅವರ ಮಾನಸಿಕ ಒತ್ತಡ ಕಡಿಮೆ ಮಾಡುವ ಕಡೆಗೆ ಗಮನ ಹರಿಸಿ" ಅಂತ ನೆಟ್ಟಿಗರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಳ್ತಿದ್ದಾರೆ.