ರಾಜ್ಯಪ್ರಶಸ್ತಿ ವಿಜೇತ ಗಾಯಕ ನವೀನ್ ಸಜ್ಜು ನಾಯಕನಾಗಿ ನಟಿಸಿರುವ ಮೊದಲ ಸಿನಿಮಾ "ಲೋ ನವೀನ' ಇದೇ ಮೇ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಅವರ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಕೆಲ ದಿನಗಳ ಹಿಂದಷ್ಟೇ "ಲೋ ನವೀನ' 50 ದಿನಗಳನ್ನು ಪೂರೈಸಿದ್ದು, ಆ ಖುಷಿಯ ಜತೆಗೆ ಸೋಮವಾರ (ಜು. 27) ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರು ನಟಿಸುತ್ತಿರುವ ಹೊಸ ಸಿನಿಮಾ ಘೋಷಣೆಯಾಗಿದೆ. "ಸೀಜರ್' ಮತ್ತು "ಹಂಟರ್' ಚಿತ್ರಗಳನ್ನು ನಿರ್ದೇಶಿಸಿರುವ ವಿನಯ್ ಕೃಷ್ಣ ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಶ್ರೀರಂಗ ಕಂಬೈನ್ಸ್ ಬ್ಯಾನರ್ನಲ್ಲಿ ಉದಯ್ ಕುಮಾರ್ ಎಸ್.ಟಿ. ಮತ್ತು ಅರುಣ್ ಕುಮಾರ್ ಸಿ. ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸದ್ಯ ಚಿತ್ರತಂಡ ಟೈಟಲ್ ಗುಟ್ಟಾಗಿಟ್ಟಿದ್ದು, ಆಷಾಢದ ಬಳಿಕ ಶೂಟಿಂಗ್ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಚಿತ್ರದ ಬಗ್ಗೆ ನಿರ್ದೇಶಕ ವಿನಯ್ ಕೃಷ್ಣ, "ನಿರಂಜನ್ ಸುಧೀಂದ್ರ ಅವರು ನಾಯಕನಾಗಿರುವ "ಹಂಟರ್' ಸದ್ಯ ರಿಲೀಸ್ಗೆ ರೆಡಿಯಿದೆ. ಆ ಬಳಿಕ ಒಂದು ಕಥೆ ಮಾಡಿಕೊಂಡಿದ್ದೆ. ಅದಕ್ಕೆ ನಾಯಕನನ್ನಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಅಂತ ಗೊಂದಲದಲ್ಲಿದ್ದೆ. ಅದೇ ಸಮಯದಲ್ಲಿ "ಲೋ ನವೀನ' ಬಿಡುಗಡೆಯಾಯಿತು. ಅದರಲ್ಲಿ ನವೀನ್ ಸಜ್ಜು ಅವರ ನಟನೆ ನೋಡಿದೆ. ಇಷ್ಟವಾಯಿತು. ಜತೆಗೆ ನನ್ನ ಕಥೆಗೆ ಇವರು ಹೊಂದುತ್ತಾರೆ ಅಂತನ್ನಿಸಿ, ಅವರ ಜತೆ ಮಾತನಾಡಿದೆ. ಅವರೂ ಒಪ್ಪಿದರು. ಇದೀಗ ಅವರ ಹುಟ್ಟುಹಬ್ಬದಂದು ಘೋಷಿಸಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ. ಇನ್ನು ನವೀನ್ ಸಜ್ಜು, ಇದಲ್ಲದೇ "ಕೆಮಿಸ್ಟ್ರಿ ಆಫ್ ಕರಿಯಪ್ಪ', "ಲವ್ ಯು ಮುದ್ದು' ಖ್ಯಾತಿಯ ಕುಮಾರ್ ನಿರ್ದೇಶನದ "ಮ್ಯಾನ್ಷನ್ ಹೌಸ್ ಮುತ್ತು' ಹಾಗೂ ಇನ್ನೂ ಹೆಸರಿಡದ ಇನ್ನೊಂದು ಸಿನಿಮಾದಲ್ಲಿ ನಟಿಸಿದ್ದು, ಇದೇ ವರ್ಷ ಈ ಎರಡು ಚಿತ್ರಗಳೂ ರಿಲೀಸ್ ಆಗುವ ನಿರೀಕ್ಷೆಯಿದೆ.
ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಥ್ರಿಲ್ಲರ್ ಜಾನರ್ ಚಿತ್ರ. ಹೀಗಾಗಿ ನವೀನ್ ಅವರನ್ನು ಹೊಸ ಅವತಾರದಲ್ಲಿ ನೋಡಬಹುದು. ಅವರಿಗೆ ಆ್ಯಕ್ಷನ್ ಮತ್ತು ಸ್ಟಂಟ್ ತರಬೇತಿ ಪಡೆಯಲು ತಿಳಿಸಿದ್ದೇನೆ. ಅವರು ಸಿದ್ಧತೆ ನಡೆಸುತ್ತಿದ್ದಾರೆ. ಬೆಂಗಳೂರು, ಮೈಸೂರು. ಕೇರಳ, ಪಾಂಡಿಚೆರಿ ಸೇರಿ ವಿವಿಧೆಡೆ ಮೂರು ಅಥವಾ ನಾಲ್ಕು ಶೆಡ್ಯೂಲ್ಗಳಲ್ಲಿ ಶೂಟಿಂಗ್ ನಡೆಸಲು ಪ್ಲಾ$್ಯನ್ ಮಾಡಿಕೊಂಡಿದ್ದೇವೆ. ಮುಂದಿನ ಸಂಕ್ರಾಂತಿ ಅಥವಾ ಶಿವರಾತ್ರಿ ಹಬ್ಬಕ್ಕೆ ರಿಲೀಸ್ ಮಾಡುವ ಆಲೋಚನೆಯಿದೆ.
- ವಿನಯ್ ಕೃಷ್ಣ, ನಿರ್ದೇಶಕ.