ಹುಣಸೂರು: ಮೂರು ಎಕರೆ ಭೂಮಿಯನ್ನು ಗುತ್ತಿಗೆಗೆ ಪಡೆದು ನೂತನ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸೇವಂತಿಗೆ ಹೂ ಬೆಳೆಯುವ ಮೂಲಕ ಇಲ್ಲೊಬ್ಬ ಯುವರೈತ ಬಾಳನ್ನು ಹೂವಾಗಿಸಿಕೊಂಡಿದ್ದಾರೆ.
ತಾಲೂಕಿನ ಕಿರಿಜಾಜಿ ಗ್ರಾಮದ ಯುವರೈತ ಶಿವಕುಮಾರ್ ಸೇವಂತಿಗೆ ಹೂವು ಕೃಷಿಯಲ್ಲಿ ಯಶಸ್ಸು ಕಂಡು ಹುಣಸೂರಿಗೆ ಹೂವುಗಳ ರಾಜನಂತೆ ಇದ್ದಾರೆ. ಹೂವಿನ ತೋಟಕ್ಕೆ ಭೇಟಿ ನೀಡಿದರೆ ಇಡೀ ಭೂಮಿ ಮತ್ತು ಆಕಾಶವೇ ಹಳದಿ ಬಣ್ಣದಿಂದ ಕಂಗೊಳಿಸಿದಂತೆ ಕಾಣುತ್ತದೆ. ಜತೆಗೆ ದೊಡ್ಡದಾಗಿ ಅರಳಿದ ಹೂವುಗಳು ಎಲ್ಲರನ್ನೂ ಸ್ವಾಗತಿಸುತ್ತವೆ.
ಶ್ರಮಜೀವಿಯ ಸಾಧನೆ: ನಾಲ್ಕನೇ ತರಗತಿ ವ್ಯಾಸಂಗ ಮಾಡಿರುವ ಶಿವಕುಮಾರ್, ಚಿಕ್ಕಂದಿನಿಂದಲೂ ಕೃಷಿ ಎಂದರೆ ಆಸಕ್ತಿ. ತಂದೆಯ ಕಾಲಾನಂತರ ತಾಯಿಯೊಂದಿಗೆ ಜಮೀನಿನಲ್ಲಿ ದುಡಿದು ಬದುಕಿನ ಜಟಕಾಬಂಡಿ ಎಳೆಯುತ್ತಿದ್ದಾರೆ. ಇದೀಗ ಹೂವುಗಳ ಕೃಷಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದು, ಪ್ರತಿ ತಿಂಗಳು ಒಂದು ಎಕರೆಗೆ 7ರಿಂದ 8 ಟನ್ ಸೇವಂತಿಗೆ ಬೆಳೆದು ಮೈಸೂರು ಸೇರಿದಂತೆ ಇತರ ಭಾಗಗಳಿಗೆ ಮಾರಾಟ ಮಾಡುತ್ತಾರೆ.
ಎಲ್‌ಇಡಿ ಲೈಟ್ ಬೆಳಕು: ಶಿವಕುಮಾರ್ ಸೇವಂತಿಗೆ ಹೂವಿನ ಕೃಷಿಯಲ್ಲಿ ಎತ್ತಿದ ಕೈ. ಸೇವಂತಿಗೆಯಲ್ಲಿ ಪ್ರಸಿದ್ಧಿ ಪಡೆದಿರುವ ಸೆನ್‌ಟೆಲ್ ತಳಿಯನ್ನು ಕೋಲ್ಕತ್ತದಿಂದ ತಂದು ಬೆಳೆಯುತ್ತಿದ್ದಾರೆ. ಇದರೊಂದಿಗೆ ಮದುವೆ ಮತ್ತಿತರ ಶುಭ ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ಬಳಸುವ ಸೇವಂತಿಗೆ ಹೂವುಗಳಾದ ಚಾಕಲೇಟ್, ಐಶ್ವರ್ಯ, ಸ್ಟಾರ್‌ವೈಟ್ ಮುಂತಾದ ವೆರೈಟಿ ಹೂವುಗಳನ್ನು ಬೆಳೆಯುತ್ತಾರೆ. ಸೇವಂತಿಗೆ ಹೂವು ದಷ್ಟಪುಷ್ಟವಾಗಿ ಬೆಳೆಯಲು ಪ್ರಮುಖವಾಗಿ ಹೆಚ್ಚಿನ ಬೆಳಕು ಅವಶ್ಯಕ. ಚಳಿಗಾಲದಲ್ಲಿ ಹಗಲು ಹೊತ್ತು ಕಡಿಮೆ ಇದ್ದರೆ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುವುದಿಲ್ಲ. ಈ ಕೊರತೆಯನ್ನು ನೀಗಿಸಲು ಶಿವಕುಮಾರ್ ವರ್ಷದ ಪ್ರತಿ ನವೆಂಬರ್‌ನಿಂದ ಜನವರಿವರೆಗೆ ಕತ್ತಲಾದ ನಂತರ ಇಡೀ ಹೂವಿನ ಜಮೀನಿಗೆ ಎಲ್‌ಇಡಿ ಬಲ್ಬ್ ಅಳವಡಿಸಿ 2-3 ತಾಸು ಬೆಳಕು ನೀಡುತ್ತಾರೆ. ಹೀಗೆ ಮಾಡುವುದರಿಂದ ನಂತರದ ದಿನಗಳಲ್ಲಿ ಗಿಡ ಮಸ್ತಾಗಿ ಬೆಳೆದು ಹೂವಿನ ಚಿಗುರು ಒಡೆದು ಅಗಲ ಮತ್ತು ಸುಂದರವಾದ ಹೂವುಗಳು ಅರಳುತ್ತವೆ.
ತೋಟಗಾರಿಕಾ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಗಿಡಗಳ ನಾಟಿ ವೇಳೆ ಪಾತಿ ಮಾಡಿದ ಜಾಗದಲ್ಲಿ ಮಿಲ್ಷಿಂಗ್ ಶೀಟ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದಾಗಿ ಗಿಡದ ಬೇರಿನಲ್ಲಿ ನೀರಿನಂಶ ಹೆಚ್ಚು ಕಾಲ ಇರುವಂತೆ ಹಾಗೂ ಕಳೆಗಿಡಗಳು ಬೆಳೆಯದಂತೆ ನಿಯಂತ್ರಣ ಮಾಡಿದ್ದಾರೆ. ಸೇವಂತಿಗೆ ಹೂವನ್ನು ಹೆಚ್ಚಾಗಿ ಬೆಳೆಯುವ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಭೇಟಿ ನೀಡಿರುವ ಶಿವಕುಮಾರ್ ಅಲ್ಲಿನ ರೈತರು ಅನುಸರಿಸುವ ವಿಧಾನಗಳನ್ನು ಇಲ್ಲೂ ಅಳವಡಿಸಿಕೊಂಡು ಯಶಸ್ಸು ಸಾಧಿಸಿದ್ದಾರೆ.
ಮೈಕ್ರೋನ್ಯೂಟ್ರಿಯೆಂಟ್‌ಗಳ ಬಳಕೆ: ಸೇವಂತಿಗೆ ಗಿಡ ಬಲಿಷ್ಠವಾಗಿ ಬೆಳೆಯಲು, ಮೊಗ್ಗು ಅರಳಲು, ಹೂವು ದಪ್ಪವಾಗಿರಲು ಮತ್ತು ಹೂವುಗಳು ಫಳಫಳ ಹೊಳೆಯುವಂತೆ ಕಾಣಲು ವಿವಿಧ ರೀತಿಯ ರಾಸಾಯನಿಕ ಗೊಬ್ಬರಗಳನ್ನು ಬಳಸಲಾಗುತ್ತದೆ. ಅಲ್ಲದೆ ತೋಟಗಾರಿಕಾ ಇಲಾಖೆಯಿಂದ ರಿಯಾಯಿತಿ ದರದಲ್ಲಿ ದೊರಕುತ್ತಿರುವ ನೀರಿನಲ್ಲಿ ಕರಗುವ ಗೊಬ್ಬರಗಳು, ಕೊಟ್ಟಿಗೆ ಗೊಬ್ಬರವನ್ನು ಬಳಸುತ್ತಾರೆ. ಇಡೀ ಜಮೀನಿಗೆ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ನೀರಿನ ಸಮರ್ಪಕ ಬಳಕೆ ಮಾಡುತ್ತಿದ್ದಾರೆ. ಪ್ರತಿ ದಿನ ಹೂವಿನ ಕಟಾವು ಸೇರಿದಂತೆ ವಿವಿಧ ಕೆಲಸಕ್ಕಾಗಿ 15ಕ್ಕೂ ಹೆಚ್ಚು ಕೃಷಿ ಕಾರ್ಮಿಕರು ಇವರ ಜಮೀನಿನಲ್ಲಿ ದುಡಿಯುತ್ತಾರೆ.
ಬೇಡಿಕೆ ಹೆಚ್ಚಿದ್ದರೆ ಲಾಭವೂ ಹೆಚ್ಚು: ಒಂದು ಎಕರೆಗೆ ಕನಿಷ್ಠ 4 ಲಕ್ಷ ರೂ. ಖರ್ಚು ಮಾಡುವ ಶಿವಕುಮಾರ್ ಸರಾಸರಿ 2 ಲಕ್ಷ ರೂ.ಗಳ ಲಾಭ ಮಾಡುತ್ತಾರೆ. ವಾರ್ಷಿಕ ಹೂವಿನ ಕೃಷಿಯಿಂದಲೇ 5 ರಿಂದ 6ಲಕ್ಷ ರೂ. ಸಂಪಾದನೆ ಆಗುತ್ತದೆ. ಇದರೊಂದಿಗೆ ಮಂಗಳೂರು ಸೌತೆ, ಕ್ಯಾಪ್ಸಿಕಂ, ಟೊಮ್ಯಾಟೊ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಶಿವಕುಮಾರರೊಂದಿಗೆ ಅವರ ತಾಯಿ ಕೂಡ ಕೃಷಿ ಕಾರ್ಯಕ್ಕೆ ಕೈಜೋಡಿಸುತ್ತಾರೆ.
ರೈತರು ವಾಣಿಜ್ಯ ಬೆಳೆಯಾದ ತಂಬಾಕನ್ನು ನಂಬಿಕೊಳ್ಳದೆ ಇಂತಹ ತೋಟಗಾರಿಕಾ ಬೆಳೆಗಳನ್ನೂ ಬೆಳೆಯುವ ಮೂಲಕ ಲಾಭ ಕಾಣಬಹುದಾಗಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಸಾಕಷ್ಟು ಅನುಕೂಲಗಳಿದ್ದು, ರೈತರು ಇದನ್ನು ಸದುಪಯೋಗಪಡಿಸಿಕೊಂಡು ಪ್ರಗತಿ ಸಾಧಿಸಬಹುದಾಗಿದೆ.
ನೇತ್ರಾವತಿ ಸಹಾಯಕ ನಿರ್ದೇಶಕಿ, ತೋಟಗಾರಿಕಾ ಇಲಾಖೆ, ಹುಣಸೂರು
ಯುವಕರು ಕೃಷಿಯಿಂದ ವಿಮುಖರಾಗುವುದು ಸರಿಯಲ್ಲ. ಶ್ರಮವಹಿಸಿ ದುಡಿದಲ್ಲಿ ಭೂಮಿ ತಾಯಿ ಮೋಸ ಮಾಡಲಾರಳು. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಚಿಕ್ಕಬಳ್ಳಾಪುರದ ರೈತಸಮೂಹ ನನಗೆ ಸೇವಂತಿಗೆ ಕೃಷಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು. ಇಲಾಖೆಯೂ ಸಹಕಾರ ನೀಡಿದ್ದು, ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಬೆಳೆಯುತ್ತಿದ್ದೇನೆ. ಲಾಭ-ನಷ್ಟ ಎಲ್ಲದರಲ್ಲೂ ಇದ್ದದ್ದೆ. ಆದರೆ ಶ್ರಮವಹಿಸಿ ದುಡಿಯುವುದು ಮುಖ್ಯ ಎನ್ನುವುದು ನನ್ನ ಅಭಿಪ್ರಾಯ.
ಶಿವಕುಮಾರ್ ಯುವರೈತ, ಕಿರಿಜಾಜಿ