ತಾಯಿ ಲುಲಿಂಗು ಮತ್ತು ಮಗುವಿನ ಅಪರೂಪದ ಕ್ಷಣ 
ನ್ಯೂಸ್

ಅಳಿವಿನಂಚಿನ ತಳಿಗೆ ಹೊಸ ಜೀವ: ಕಳ್ಳರ ಸಂಚಿನಿಂದ ಪಾರಾಗಿ ಕಾಡಿನಲ್ಲಿ ಮಗುವಿಗೆ ಜನ್ಮ ನೀಡಿದ ಹೆಣ್ಣು ಗೊರಿಲ್ಲಾ! | Lulingu Gorilla

ಕಳ್ಳಸಾಗಣೆದಾರರಿಂದ ರಕ್ಷಿಸಲ್ಪಟ್ಟು ಕಾಡಿಗೆ ಮರಳಿದ್ದ ‘ಲುಲಿಂಗು’ ಎಂಬ ಅಪರೂಪದ ಗೊರಿಲ್ಲಾ ಇದೀಗ ಮಗುವಿಗೆ ಜನ್ಮ ನೀಡಿದ್ದು, ಅಳಿವಿನಂಚಿನಲ್ಲಿರುವ ಈ ತಳಿಯ ಉಳಿವಿಗೆ ಹೊಸ ಭರವಸೆ ಮೂಡಿಸಿದೆ.

Wildlife Conservation: ಬಾಲ್ಯದಲ್ಲೇ ವನ್ಯಜೀವಿ ಕಳ್ಳಸಾಗಣೆದಾರರ ಕೈಗೆ ಸಿಲುಕಿ, ಆನಂತರ ಪುನರ್ವಸತಿ ಕೇಂದ್ರದಲ್ಲಿ ಬೆಳೆದು ಕಾಡಿಗೆ ಮರಳಿದ್ದ ಅಪರೂಪದ ಜಾತಿಗೆ ಸೇರಿದ ಹೆಣ್ಣು ಗೊರಿಲ್ಲಾವೊಂದು ಇದೀಗ ಕಾಡಿನಲ್ಲಿ ಯಶಸ್ವಿಯಾಗಿ ಮಗುವಿಗೆ ಜನ್ಮ ನೀಡಿದೆ.

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ (DRC) ವಿರುಂಗಾ ರಾಷ್ಟ್ರೀಯ ಉದ್ಯಾನವನದ ಮೌಂಟ್ ಶಿಯಾಬೆರಿಮು ಪ್ರದೇಶದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಅಳಿವಿನಂಚಿನಲ್ಲಿರುವ ಗೊರಿಲ್ಲಾ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಕೃತಿ ಪ್ರೇಮಿಗಳಿಗೆ ದೊಡ್ಡ ಭರವಸೆ ಮೂಡಿಸಿದೆ.

ಕಳ್ಳಸಾಗಣೆದಾರರ ವಶದಿಂದ ಕಾಡಿನವರೆಗೆ

2016ರಲ್ಲಿ ಲುಲಿಂಗು ಕೇವಲ 18 ತಿಂಗಳ ಮಗುವಾಗಿದ್ದಾಗ, ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಕಳ್ಳಸಾಗಣೆದಾರರಿಂದ ಸಂರಕ್ಷಣಾ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದರು. ಬಳಿಕ ಆಕೆಯನ್ನು ‘ಗೊರಿಲ್ಲಾ ರಿಹ್ಯಾಬಿಲಿಟೇಶನ್ ಆಂಡ್ ಕನ್ಸರ್ವೇಶನ್ ಎಜುಕೇಶನ್’ (GRACE) ಕೇಂದ್ರಕ್ಕೆ ಸೇರಿಸಿ ಆರೈಕೆ ಮಾಡಲಾಗಿತ್ತು.

ವಿರುಂಗಾ ರಾಷ್ಟ್ರೀಯ ಉದ್ಯಾನವನದ ಗೊರಿಲ್ಲಾ ಗುಂಪು

ತಾಯಿಯಾದ ಲುಲಿಂಗು

ಕೇಂದ್ರದಲ್ಲಿ ಬೆಳೆದು ದೊಡ್ಡವಳಾದ ಲುಲಿಂಗು ಹಾಗೂ ಇತರ ಮೂರು ಹೆಣ್ಣು ಗೊರಿಲ್ಲಾಗಳನ್ನು 2024ರ ಕೊನೆಯಲ್ಲಿ ಕಾಡಿಗೆ ಮರಳಿಸಲಾಗಿತ್ತು. ಅಲ್ಲಿ 'ಮ್ವಾಸ' ಎಂಬ ಗಂಡು ಗೊರಿಲ್ಲಾದ ಗುಂಪನ್ನು ಸೇರಿದ್ದ ಲುಲಿಂಗು, ಇದೀಗ ಯಶಸ್ವಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ.

ಈ ಜನನವೇಕೆ ಮುಖ್ಯ?

ಮೌಂಟ್ ಶಿಯಾಬೆರಿಮುವಿನಲ್ಲಿರುವ ಗ್ರಾವುಯರ್ಸ್ ಗೊರಿಲ್ಲಾಗಳ ಸಂಖ್ಯೆ ತೀರಾ ಕಡಿಮೆಯಿದೆ. ಸೂಕ್ತ ಸಂತಾನೋತ್ಪತ್ತಿ ನಡೆಯದಿದ್ದರೆ ಮುಂದಿನ 50 ವರ್ಷಗಳಲ್ಲಿ ಈ ತಳಿ ಸಂಪೂರ್ಣವಾಗಿ ಅಳಿದುಹೋಗುವ ಅಪಾಯವಿತ್ತು. ಆದರೆ ಲುಲಿಂಗು ಕಾಡಿನ ವಾತಾವರಣಕ್ಕೆ ಹೊಂದಿಕೊಂಡು ಮಗುವಿಗೆ ಜನ್ಮ ನೀಡಿರುವುದು ಈ ಅಪರೂಪದ ತಳಿಯ ಉಳಿವಿಗೆ ಹೊಸ ಭರವಸೆ ಮೂಡಿಸಿದೆ.

ಇದನ್ನೂ ಓದಿ: ಮರಳಿನ ಮೇಲೆ ಅಕ್ಷರ ಕಲಿಕೆ: ಪೆಪರ್-ಪೆನ್ ಇಲ್ಲದೆ ಮಕ್ಕಳಿಗೆ ಪಾಠ ಪಾಠ ಮಾಡೋ ಕೇರಳದ ಅಜ್ಜಿ | Viral teaching

ಪ್ರಸ್ತುತ ತಾಯಿ ಲುಲಿಂಗು ಹಾಗೂ ಆಕೆಯ ಮಗು ಸಂಪೂರ್ಣ ಆರೋಗ್ಯವಾಗಿದ್ದು, ಸಂರಕ್ಷಣಾ ತಂಡವು ಇವುಗಳ ಪ್ರತಿಯೊಂದು ಚಲನವಲನಗಳ ಮೇಲೆ ತೀವ್ರ ಕಣ್ಣಿಟ್ಟಿದೆ. ವನ್ಯಜೀವಿ ಸಂರಕ್ಷಣೆಯಲ್ಲಿ ಇದು ಒಂದು ಹೆಮ್ಮೆಯ ಕ್ಷಣವಾಗಿದೆ.