ಶಿವಮೊಗ್ಗ: ಹೊಸ ತಲೆಮಾರಿನವರಿಗೆ ಕರ್ನಾಟಕ ಏಕೀಕರಣದ ಅರಿವಿಲ್ಲ. ರಾಜಕಾರಣದ ಲೆಕ್ಕಾಚಾರದಲ್ಲಿ ಎರಡು ರಾಜ್ಯ ರಚನೆಯ ಒತ್ತಾಸೆಯಿತ್ತು. 1956 ರಿಂದ 1973ರವರೆಗಿನ ಒತ್ತಾಯದ ಫಲವಾಗಿ ಅಂದಿನ ಸಿಎಂ ದೇವರಾಜ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಇತಿಹಾಸ ಎಂದು ಸಾಹಿತಿ ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.
ಜಿಲ್ಲಾ ಕಸಾಪದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣ ಹಿನ್ನಲೆ, ಆಶಯ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಬ್ರಿಟಿಷರ ಕಾಲದಲ್ಲಿ ಧಾರವಾಡ ಭಾಗದಲ್ಲಿ ಕನ್ನಡ ಅನಕ್ಷರಸ್ಥರ, ಗ್ರಾಮೀಣರ ಭಾಷೆಯಾಗಿತ್ತು. ಕಲ್ಯಾಣ ಕರ್ನಾಟಕ ನಿಜಾಮರ ಆಡಳಿತದಲ್ಲಿತ್ತು. ಅಲ್ಲಿ ಪ್ರಾಥಮಿಕದಿಂದ ಕಾಲೇಜುವರೆಗೆ ಉರ್ದು ಓದಬೇಕಾಗಿತ್ತು ಎಂದು ನೆನಪಿಸಿಕೊಂಡರು.
ಕನ್ನಡ ಶಾಲೆಗಳು, ಕಾಲೇಜುಗಳು ಇಲ್ಲದ ಪರಿಸ್ಥಿತಿಯಲ್ಲಿ ನಮ್ಮ ಹಿರಿಯರು ತಾಯಿನುಡಿಗೆ ಮಾನ್ಯತೆ ಸಿಗಬೇಕು ಎಂದು ಹೋರಾಟ ನಡೆಸಿದ್ದರು. ಸಾಹಿತಿಗಳು ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಡಾ.ಎಚ್.ಟಿ.ಕೃಷ್ಣಮೂರ್ತಿ ಮಾತನಾಡಿ, ಇತಿಹಾಸದ ಅರಿವು ಬೆಳಕಾಗಬೇಕೇ ಹೊರತು ಬೆಂಕಿಯಾಗಬಾರದು. ಘಟನೆಯ ಯಾವುದೇ ಒಂದು ಭಾಗವನ್ನು ಇಟ್ಟುಕೊಂಡು ಅದೇ ಅಂತಿಮ ಅಂದುಕೊಳ್ಳಬಾರದು. ಕರ್ನಾಟಕ ಏಕೀಕರಣ ಸವಾಲುಗಳನ್ನು ಎದುರಿಸಿ ಆಶಯಗಳನ್ನು ಈಡೇರಿಸುವಲ್ಲಿ ರಾಜಕೀಯ ಸುಸ್ಥಿತಿಯೂ ಕಾರಣವಾಗಿದೆ ಎಂದು ಹೇಳಿದರು. ಮಾಜಿ ಶಾಸಕ ಬಿ.ಸ್ವಾಮಿರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ತಾಲೂಕು ಅಧ್ಯಕ್ಷೆ ಮಹಾದೇವಿ, ವೈದ್ಯೆ ಡಾ.ರಜನಿ ಪೈ ಮುಂತಾದವರಿದ್ದರು.