ನವದೆಹಲಿ: ದೇಶದಾದ್ಯಂತ ಸೋಮವಾರ(ಜುಲೈ 1) ರಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರಲಾಗಿದ್ದು, ದೆಹಲಿಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ: ಜಲಪಾತ ನೋಡಲು ಹೋಗಿ ಪ್ರವಾಹದಲ್ಲಿ ಕೊಚ್ಚಿಹೋದ ಐವರು!
ದೆಹಲಿಯಲ್ಲಿ ಹೊಸ ಕಾನೂನಿನಡಿಯಲ್ಲಿ ಮೊದಲ ಪ್ರಕರಣ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಹೊಸ ಕಾಯ್ದೆ ಬಿಎನ್‌ಎಸ್ ಸೆಕ್ಷನ್ 285 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನವದೆಹಲಿ ರೈಲು ನಿಲ್ದಾಣದ ಫುಟ್‌ಓವರ್ ಸೇತುವೆಯ ಕೆಳಗೆ ಮಾರಾಟ ಮಾಡುವ ಮೂಲಕ ಸಂಚಾರಕ್ಕೆ ಅಡ್ಡಿಪಡಿಸಿದ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೆಹಲಿ ಪೊಲೀಸರ ಎಫ್‌ಐಆರ್ ಪ್ರಕಾರ, ನವದೆಹಲಿ ರೈಲು ನಿಲ್ದಾಣದ ಫುಟ್‌ಓವರ್ ಸೇತುವೆಯ ಕೆಳಗೆ ಸರಕು ಮಾರಾಟ ಮಾಡುತ್ತಿದ್ದ ಆರೋಪಿ ಬಿಹಾರದ ನಿವಾಸಿ. ಆತ ಬಿಹಾರದ ಬರ್ಹ್ ಭಕ್ತಿಯಾರಪುರದ ನಿವಾಸಿಯಾಗಿದ್ದಾನೆ. ಆರೋಪಿಯ ಹೆಸರು ಪಂಕಜ್ ಕುಮಾರ್ ಎಂದು ಪೊಲೀಸರು ತಿಳಿಸಿದ್ದಾರೆ.
ಆತ ನಿಲ್ದಾಣದ ಬಳಿ ಬೀದಿ ವ್ಯಾಪಾರ ಮಾಡಿಕೊಂಡಿದ್ದು, ಬೀಡಿ, ಸಿಗರೇಟ್ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಇದರಿಂದ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗಿತ್ತು. ಗಾಡಿ ತೆಗೆಯಲು ಕೇಳಿದಾಗ ಆತ ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.