| ರಾಘವ ಶರ್ಮ ನಿಡ್ಲೆ ನವದೆಹಲಿ
2011ರ ಜನಗಣತಿ ಪ್ರಕಾರ ಪಂಜಾಬ್ನ ಜನಸಂಖ್ಯೆಯಲ್ಲಿ ಜಾಟ್ ಸಿಖ್ಖರ ಸಂಖ್ಯೆ ಶೇ.20ರಷ್ಟಿದ್ದು, ರಾಜ್ಯದ ಅತಿದೊಡ್ಡ ಜಾತಿ ಎಂದು ಗುರುತಿಸಿಕೊಂಡಿದೆ. ರಾಜಕೀಯ, ಧಾರ್ವಿುಕ, ಸಾಮಾಜಿಕ, ಸಾಂಸ್ಕೃತಿಕ ಸೇರಿ ವಿವಿಧ ಸ್ತರಗಳಲ್ಲೂ ಈ ಜಾತಿಯ ಪ್ರಭಾವಲಯ ದೊಡ್ಡ ಮಟ್ಟದಲ್ಲೇ ವಿಸ್ತರಣೆಗೊಂಡಿದೆ. ಮೊದಲ ಬಾರಿಗೆ ರಾಜ್ಯದಲ್ಲಿ ದಲಿತ ಸಿಖ್ (ರಾಮ್ಾಸಿಯಾ) ಸಮುದಾಯದ ವ್ಯಕ್ತಿಯೊಬ್ಬರು (ಚರಣ್ಜಿತ್ ಸಿಂಗ್ ಚನ್ನಿ) ಮುಖ್ಯಮಂತ್ರಿಯಾಗುವ ಮೂಲಕ ಮೂಲಕ ‘ಜಾಟ್ ಸಿಖ್ ವರ್ಸಸ್ ದಲಿತ ಸಿಖ್’ ರಾಜಕಾರಣದ ಚರ್ಚೆ ಮುನ್ನೆಲೆಗೆ ಬಂದಿದೆ.
ರಾಜ್ಯದಲ್ಲಿ ದಲಿತ ಸಿಖ್ಖರೊಬ್ಬರನ್ನು ಸಿಎಂ ಮಾಡಿ ಇತಿಹಾಸ ಸೃಷ್ಟಿಸಿದ್ದೇವೆ ಎಂದು ಕಾಂಗ್ರೆಸ್ ದೆಹಲಿ ಮುಖಂಡರು ಬೀಗುತ್ತಿರುವ ಮಧ್ಯೆ, ಜಾಟ್ ಸಿಖ್ ಸಮುದಾಯಕ್ಕೆ ಸೇರಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ರನ್ನು ಸಿಎಂ ಕುರ್ಚಿ ಯಿಂದ ಕೆಳಗಿಳಿಸಿದ ಘಟನೆ ಜಾಟ್ ಸಿಖ್ಖರನ್ನು ಒಳಗೊಳಗೇ ಕುದಿಯುವಂತೆ ಮಾಡಿದೆ. ಹೀಗಾಗಿಯೇ, ಕ್ಯಾಪ್ಟನ್ ಮುಂದಿನ ದಿನಗಳಲ್ಲಿ ಕೈಗೊಳ್ಳುವ ‘ರಾಜಕೀಯ ನಿರ್ಧಾರ’ ಕಾಂಗ್ರೆಸ್ ಭವಿಷ್ಯ ತೀರ್ವನಿಸಲಿದೆ ಎಂಬ ಮಾತುಗಳು ಪಕ್ಷದಲ್ಲೇ ಕೇಳಿಬರುತ್ತಿವೆ. ಆಡಳಿತಾತ್ಮಕವಾಗಿ ಉತ್ತಮ ನಿರ್ವಹಣೆ ತೋರಿದರೂ ರಾಜೀನಾಮೆ ನೀಡಬೇಕಾಗಿ ಬಂತು ಎಂದು ರಾಹುಲ್-ಪ್ರಿಯಾಂಕಾ ಗಾಂಧಿ ವಿರುದ್ಧ ಆಕ್ರೋಶಗೊಂಡಿರುವ ಕ್ಯಾಪ್ಟನ್, ತಮ್ಮದೇ ಪ್ರತ್ಯೇಕ ಪಕ್ಷ ಸ್ಥಾಪನೆ ಮಾಡಲೂಬಹುದು. ಹೊಸ ಪಕ್ಷ ಕಟ್ಟುವುದರಿಂದ ಕ್ಯಾಪ್ಟನ್ಗೆ ಹೆಚ್ಚು ಲಾಭವಿಲ್ಲದಿದ್ದರೂ, ಅದರಿಂದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಾನಿಯಾಗುವುದು ನಿಶ್ಚಿತ. ಹೀಗಾಗಿಯೇ, ಕ್ಯಾಪ್ಟನ್ರನ್ನು ಸಮಾಧಾನಪಡಿಸಲು ಹಿರಿಯ ಕಾಂಗ್ರೆಸ್ಸಿಗರು ಯತ್ನಿಸುತ್ತಿದ್ದಾರೆ.
ರಾಜ್ಯದಲ್ಲಿ ಶಿರೋಮಣಿ ಅಕಾಲಿದಳದೊಂದಿಗೆ ಮೈತ್ರಿ ಕಡಿದುಕೊಂಡ ಬಳಿಕ ಏಕಾಂಗಿಯಾಗಿರುವ ಬಿಜೆಪಿ ಪ್ರಬಲ ಜಾಟ್ ಸಿಖ್ ನಾಯಕನೊಬ್ಬನ ಹುಡುಕಾಟದಲ್ಲಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಇದಕ್ಕೆ ಒಪು್ಪತ್ತಾರಾ ಎಂಬ ಸ್ಪಷ್ಟತೆ ಇಲ್ಲ. ಚರಣ್ಜಿತ್ ಚನ್ನಿ ಪ್ರತಿನಿಧಿಸುವ ರಾಮ್ಾಸಿಯಾ ಸಿಖ್ ಸಮಾಜ ದಲಿತರೊಳಗೆ ಪ್ರಭಾವಿ ಎಂದು ಗುರುತಿಸಿಕೊಂಡಿದೆ. ಮೊದಲಿಗೆ ರಾಮ್ಾಸಿಯಾ ಹಿಂದು ಧರ್ಮದಲ್ಲಿತ್ತು, ನಂತರದಲ್ಲಿ ಅನೇಕರು ಸಿಖ್ ಧರ್ಮಕ್ಕೆ ಮತಾಂತರಗೊಂಡರು ಎಂದು ಹೇಳಲಾಗಿದೆ. ರಾಮ್ಾಸಿಯಾದ ಒಂದಿಷ್ಟು ಮಂದಿ ಈಗಲೂ ಹಿಂದು ಧರ್ಮ ಪಾಲಿಸುತ್ತಾರೆ. ರಾಜ್ಯದಲ್ಲಿ ಶೇ.32ರಷ್ಟಿರುವ ದಲಿತರಲ್ಲಿ ಶೇ.14ರಷ್ಟು ರಾಮ್ಾಸಿ ಮತ್ತು ರವಿದಾಸಿ ಸಮಾಜದವರೇ ಇದ್ದಾರೆ. ಚನ್ನಿ ಆಯ್ಕೆಯಿಂದಾಗಿ ಜಾಟ್ ಸಿಖ್ಖರು ಶಿರೋಮಣಿ ಅಕಾಲಿದಳದ ಕಡೆ ಮುಖ ಮಾಡಲೂಬಹುದು. ಚನ್ನಿ ಕ್ಯಾಪ್ಟನ್ ಅಥವಾ ಸಿಧುರಂತೆ ಜನಸಮೂಹ ಸೆಳೆದಿಲ್ಲ. ಈಗ ಮುಖ್ಯಮಂತ್ರಿಯಾಗಿರುವುದರಿಂದ ವರ್ಚಸ್ಸು ಹೆಚ್ಚಿಸಿಕೊಳ್ಳುವ ಉಜ್ವಲ ಅವಕಾಶ ಅವರ ಮುಂದಿದೆ. ರಾಜ್ಯದಲ್ಲಿ ಶೇ.38.5 ಹಿಂದು ಮತದಾರರಿದ್ದು, ನವಜೋತ್ ಸಿಧು ಕಾಶ್ಮೀರ ಹಾಗೂ ಪಾಕಿಸ್ತಾನದ ವಿಷಯಗಳಲ್ಲಿ ತೆಗೆದುಕೊಂಡಿರುವ ಕೆಲ ನಿಲುವುಗಳು ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದು ಮತಗಳು ವಿಭಜನೆಗೊಳ್ಳಬಾರದೆಂದೇ ಕ್ಯಾಪ್ಟನ್ ಸಿಂಗ್, ಸಿಧು ಹೇಳಿಕೆಗೆ ಸಮ್ಮತಿಯಿಲ್ಲ ಎಂದು ಅನೇಕ ಬಾರಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ, ಜಾಟ್ ಸಿಖ್ ಮತ್ತು ಹಿಂದುಗಳನ್ನು ಒಗ್ಗೂಡಿಸಿಕೊಂಡು ಹೋಗಬಲ್ಲ ರಾಜಕೀಯ ಕಾರ್ಯವೈಖರಿ ತೋರಬೇಕಾದ ಸವಾಲು ಕೂಡ ಸಿಎಂ ಚನ್ನಿ ಮುಂದಿದೆ.
ಸಿಧು ನೇತೃತ್ವದಲ್ಲಿ ಮುಂದಿನ ಚುನಾವಣೆ: ಏತನ್ಮಧ್ಯೆ, ಮುಂದಿನ ಚುನಾವಣೆಯನ್ನು ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ನೇತೃತ್ವದಲ್ಲೇ ಎದುರಿಸಲಾಗುವುದು ಎಂದು ರಾಜ್ಯ ಉಸ್ತುವಾರಿ ಹರೀಶ್ ರಾವತ್ ನೀಡಿದ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ. ದಲಿತ ಮತಬ್ಯಾಂಕ್ ಸೆಳೆಯಲು ಮಾತ್ರ ಚರಣ್ಜಿತ್ ಸಿಂಗ್ರನ್ನು ನಾಮಕಾವಸ್ತೆ ಸಿಎಂ ಮಾಡಲಾಗಿದೆ ಎಂದು ವಿಪಕ್ಷಗಳು ಟೀಕಿಸುತ್ತಿವೆ. ರಾವತ್ ಹೇಳಿಕೆಯ ಹಾನಿ ತಪ್ಪಿಸಲು ತಕ್ಷಣವೇ ಸ್ಪಷ್ಟೀಕರಣ ನೀಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಚುನಾವಣೆಗೆ ಸಿಎಂ ಚನ್ನಿ ಮತ್ತು ಸಿಧು ಇಬ್ಬರ ನಾಯಕತ್ವವೂ ಇರಲಿದೆ ಎಂದು ತೇಪೆ ಹಚ್ಚಿದ್ದಾರೆ.
ಪ್ರತಿಪಕ್ಷದ ತಂತ್ರ ಏನು?: ಒಂದು ಹಂತದಲ್ಲಿ ಕಾಂಗ್ರೆಸ್ ನಾಯಕ, ಜಾಟ್ ಸಿಖ್ ಸಮುದಾಯದ ಸುಖ್ಜಿಂದರ್ ಸಿಂಗ್ ರಾಂಧವ ಅವರನ್ನು ಸಿಎಂ ಮಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ತೀರ್ವನಿಸಿತ್ತು. ಜಾಟ್ ಸಿಖ್ ವ್ಯಕ್ತಿಯನ್ನು ಸಿಎಂ ಮಾಡಬೇಕೆನ್ನುವುದಾದರೆ ನನ್ನನ್ನೇ ಮಾಡಿ ಎನ್ನುವುದು ಸಿಧು ಪ್ರತಿಪಾದನೆಯಾಗಿತ್ತು. ಆದರೆ, ಹೈಕಮಾಂಡ್ ಒಪ್ಪಲಿಲ್ಲ. ಇನ್ನು ಸಿಧು ಬಂಡೇಳುವುದು ಬೇಡ ಎಂದು ಅಂತಿಮವಾಗಿ ದಲಿತ ಸಿಖ್ಗೆ ಮಣೆ ಹಾಕಲಾಯಿತು. ಚನ್ನಿ ಸಿಎಂ ಆಗಿರುವುದನ್ನು ಸಿಧು ಒಪ್ಪಿರಬಹುದು. ಆದರೆ, ಮುಂದಿನ ಚುನಾವಣೆ ಗೆದ್ದು ಉನ್ನತ ಹುದ್ದೆಗೇರಬೇಕೆಂಬುದು ಸಿಧು ಮಹತ್ವಾಕಾಂಕ್ಷೆ. ಈ ವಿಷಯವನ್ನಿಟ್ಟುಕೊಂಡೇ ಆಮ್ ಅದ್ಮಿ ಪಾರ್ಟಿ ಮತ್ತು ಶಿರೋಮಣಿ ಅಕಾಲಿದಳ-ಬಿಎಸ್ಪಿ ಮೈತ್ರಿಕೂಟ ಕಾಂಗ್ರೆಸ್ನ್ನು ಗುರಿ ಮಾಡಲಿದೆ. ‘4 ತಿಂಗಳಿಗಷ್ಟೇ ದಲಿತ ಸಿಖ್ ಸಿಎಂ. ನಂತರ ಸಿಎಂ ಆಗುವವರೇ ಬೇರೆ’ ಎಂಬುದು ಎದುರಾಳಿ ಪಕ್ಷಗಳ ರಾಜಕೀಯ ನಿರೂಪಣೆಯಾಗಿರಲಿದೆ. ಚುನಾವಣೆ ಗೆದ್ದರೆ ಸಿಎಂ ಆಗಿ ಚರಣ್ಜಿತ್ ಚನ್ನಿಯವರನ್ನೇ ಮುಂದುವರಿಸುತ್ತೀರಾ ಎಂಬ ವಿಪಕ್ಷಗಳ ಪ್ರಶ್ನೆಗೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕಾಂಗ್ರೆಸ್ ಕಂಡುಕೊಳ್ಳುವ ಉತ್ತರ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಲಿದೆ.