ತಿ.ನರಸೀಪುರ: ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಶೋಭಾ ಅವರನ್ನು ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿಯನ್ನಾಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದ್ದು, ತಾಲೂಕು ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶಿವಮೂರ್ತಿ ಅವರನ್ನು ನಿಯೋಜಿಸಲಾಗಿದೆ.
ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ, ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯಲು ಜಿ.ಶೋಭಾ ಶ್ರಮಿಸಿದ್ದರು.
ವರ್ಗಾವಣೆಗೊಂಡ ಜಿ.ಶೋಭಾ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಅವರಿಗೆ ಸ್ವಾಗತ ಕಾರ್ಯಕ್ರಮವನ್ನು ತಾಲೂಕು ಶಿಕ್ಷಕರ ಸಂಘದ ವತಿಯಿಂದ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ನಿರ್ಗಮಿತ ಬಿಇಒ ಜಿ.ಶೋಭಾ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಒಂದು ವರ್ಷದಿಂದ ತಿ.ನರಸೀಪುರದಲ್ಲಿ ಕಾರ್ಯನಿರ್ವಹಿಸಿದ್ದು, ಎಲ್ಲರ ಸಹಕಾರ ದೊರೆತಿದೆ. ಮುಂಬರುವವರಿಗೂ ಸಹಕಾರ ನೀಡುವಂತೆ ಹೇಳಿದರು.
ನೂತನ ಬಿಇಒ ಶಿವಮೂರ್ತಿ ಮಾತನಾಡಿ, ಆಶಯಗಳಿಗೆ ಪೂರಕವಾಗಿ ಕೆಲಸ ನಿರ್ವಹಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರ್ ಮೂರ್ತಿ, ನಿಕಟಪೂರ್ವ ಅಧ್ಯಕ್ಷ ಎಚ್.ಡಿ. ಮಾದಪ್ಪ, ಪ್ರಧಾನ ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ, ಖಜಾಂಚಿ ಸೋಸಲೆ ನಾಗೇಶ್, ಉಪಾಧ್ಯಕ್ಷೆ ಚಾಮುಂಡೇಶ್ವರಿ, ಸಹ ಕಾರ್ಯದರ್ಶಿ ಚಿತ್ರಾ, ವಿಶಾಲಾಕ್ಷಿ, ಸುಬ್ಬಣ್ಣ, ಗೌರಮ್ಮ, ಗೌರಮ್ಮಣ್ಣಿ , ಸೋಮಶೇಖರ್ ಇತರರು ಇದ್ದರು.