ನ್ಯೂಸ್

BBMP ಆಗುತ್ತಾ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ? 4 ಹೊಸ ವಲಯಗಳ ಸೇರ್ಪಡೆ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರಕ್ಕೆ ಆರಂಭದಲ್ಲೇ ವರುಣಾಘಾತ ಬಿದ್ದಿದ್ದು ಟೆಕ್ಕಿಯೋರ್ವಳು ಅಂಡರ್ ಪಾಸ್ ಒಳಗೆ ಸಿಲುಕಿ ಮೃತಪಟ್ಟಿದ್ದರು. ಮಳೆಯಿಂದಾಗಿ ಬೆಂಗಳೂರಿನ ಅವಾಂತರಗಳು ಜಗಜ್ಜಾಹೀರಾಗಿವೆ. ಬೆಂಗಳೂರಿನ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ನೀಡಲು ಸಿಎಂ ಸೂಚನೆ ನೀಡಿದ್ದು ಆಡಳಿತ ಸರಳೀಕರಣ ಹಾಗೂ ಎಫಿಷಿಯಂಟ್ ಗವರ್ನೆಂಸ್ ನೀಡಲು ಯೋಜನೆ ರೂಪಿಸಲಾಗಿದೆ.

ಬೆಂಗಳೂರು ಅಭಿವೃದ್ಧಿ ಹಿತದೃಷ್ಟಿಯಿಂದ ನಾಲ್ಕು ಹೊಸ ವಲಯಗಳ ಸೃಷ್ಟಿಗೆ ನಿರ್ಧಾರ ಮಾಡಲಾಗಿದ್ದು ಈಗ ಇರುವ 8 ವಲಯಗಳು ಸೇರಿದಂತೆ ಒಟ್ಟು 12 ವಲಯಗಳಾಗಿ ಬಿಬಿಎಂಪಿ ವಿಂಗಡನೆಯಾಗಲಿದೆ. ಬಿಬಿಎಂಪಿ ವಾರ್ಡ್ ಗಳ ಸಂಖ್ಯೆ ಏರಿಕೆ ಮಾಡಿದ ಹಿನ್ನೆಲೆ ವಲಯಗಳನ್ನೂ ಏರಿಸುವ ಅವಶ್ಯಕತೆ ಇದೆ ಎನ್ನಲಾಗಿದೆ. ಬಿಬಿಎಂಪಿ ಕಾಯ್ದೆ 2020ರ ಅಡಿಯಲ್ಲಿ 225 ರಿಂದ 250 ವಾರ್ಡ್ ಗಳಿದ್ದರೆ ವಲಯ ವಿಂಗಡಿಸುವ ಅವಕಾಶ ಇದ್ದು ವಲಯಗಳಲ್ಲಿನ ಅಸಮಾನತೆ ‌ನೀಗಿಸಲು ಬಿಬಿಎಂಪಿಯಲ್ಲಿ ಹೊಸ ನಾಲ್ಕು ಜೋನ್ ಗಳ ಸೃಷ್ಟಿಗೆ ಚಿಂತನೆ ನಡೆಸಲಾಗಿದೆ. ಸದ್ಯ 12 ರಿಂದ 15 ವಲಯಗಳಾಗಿ ಬಿಬಿಎಂಪಿ ವ್ಯಾಪ್ತಿಯನ್ನು ವಿಂಗಡಿಸಲು ಬಿಬಿಎಂಪಿ ಕಾಯ್ದೆ ಯಲ್ಲಿ ಅವಕಾಶ ಇದೆ.

ಸುಗಮ ಆಡಳಿತ ಹಾಗೂ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ವಲಯ ವಿಂಗಡಿಸಲು ಅವಕಾಶ ಇದ್ದು ಈ ನಿಟ್ಟಿನಲ್ಲಿ 8 ವಲಯಗಳಿರುವ ಬೆಂಗಳೂರು ನಗರ ವ್ಯಾಪ್ತಿಯನ್ನು 12ಕ್ಕೇರಿಸುವ ಲೆಕ್ಕಾಚಾರ ನಡೆಸಲಾಗುತ್ತಿದೆ. ಈ ಪ್ರಸ್ತಾವನೆ ಶೀಘ್ರ ಸಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ.

2019 - 2020ರಲ್ಲಿ 10 ವಲಯಗಳನ್ನಾಗಿ ವಿಂಗಡಿಸಲು ಬಿಬಿಎಂಪಿ ಹೊರಟಿತ್ತು. ಈ ವೇಳೆ ಸರ್ಕಾರದಿಂದ ಅನುಮೋದನೆ ಪಡೆಯಲು ವಿಫಲವಾಗಿತ್ತು. ಇದೀಗ ಹೊಸ ವಲಯಗಳ ಸೃಷ್ಟಿಯಾದರೆ ಗಡಿಗುರುತು ಕೂಡ ಅನಿವಾರ್ಯವಾಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ಭಾಗವೂ ಈ ಮೂಲಕ ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳಲು ಅವಕಾಶ ಉಂಟಾಗಲಿದೆ. ಹೀಗಾದರೆ ಸಿಲಿಕಾನ್ ಸಿಟಿ ಮತ್ತಷ್ಟು ವಿಸ್ತಾರವಾಗುವ ಸಾಧ್ಯತೆ ಇದ್ದು ಗ್ರೇಟರ್ ಬೆಂಗಳೂರು ಆಗುವತ್ತ ರಾಜಧಾನಿ ಮುನ್ನಡೆಯುತ್ತಿದೆ.

ದಿಗ್ವಿಜಯ ಸುದ್ದಿ ಸಂಸ್ಥೆಗೆ ಈ ಕುರಿತಾಗಿ ಬಿಬಿಎಂಪಿಯ ಉನ್ನತ ಮೂಲಗಳಿಂದ ನಿಖರ ಮಾಹಿತಿ ಲಭಿಸಿದೆ. ಈ ಹಿಂದೆ ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಲ್ಲಿ ಬಿಬಿಎಂಪಿಯನ್ನೇ ವಿಭಜಿಸಲು ತೀರ್ಮಾನಿಸಿದ್ದರು. ಬೆಂಗಳೂರಿಗೆ ಎರಡರಿಂದ ಮೂರು ಪಾಲಿಕೆಗೆ ಯೋಜನೆ ರೂಪಿಸಲಾಗಿತ್ತು. ಈಗ ಮತ್ತೆ ಮುಖ್ಯಮಂತ್ರಿ ಆಗುತ್ತಿದ್ದಂತೆ ವಲಯ ವಿಭಜನೆಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸದ್ಯಕ್ಕಿರುವ ಬಿಬಿಎಂಪಿ 8 ವಲಯಗಳು:

  1. ಬೆಂಗಳೂರು ಪೂರ್ವ
  2. ಬೆಂಗಳೂರು ಪಶ್ಚಿಮ
  3. ಬೆಂಗಳೂರು ದಕ್ಷಿಣ
  4. ಆರ್ ಆರ್ ನಗರ
  5. ದಾಸರಹಳ್ಳಿ
  6. ಬೊಮ್ಮನಹಳ್ಳಿ
  7. ಮಹಾದೇವಪುರ
  8. ಯಲಹಂಕ

ಆ 4 ಹೊಸ ವಲಯಗಳು ಯಾವುದಾಗಿರಬಹುದು?

  1. ಜಯನಗರ
  2. ವಿಜಯನಗರ
  3. ಮಲ್ಲೇಶ್ವರ
  4. ಗಾಂಧಿನಗರ

ಯಾವ್ಯಾವ ವಲಯದಲ್ಲಿ ಎಷ್ಟೆಷ್ಟು ವಾರ್ಡ್?

  1. ಬೆಂಗಳೂರು ದಕ್ಷಿಣ – 44
  2. ಬೆಂಗಳೂರು ಪಶ್ಚಿಮ – 44
  3. ಬೆಂಗಳೂರು ಪೂರ್ವ – 44
  4. ಬೊಮ್ಮನಹಳ್ಳಿ – 16
  5. ಮಹದೇವಪುರ – 15
  6. ಯಲಹಂಕ – 11
  7. ಆರ್ ಆರ್ ನಗರ – 14
  8. ದಾಸರಹಳ್ಳಿ - 10