ನ್ಯೂಸ್

ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಿ: ರಾಜ್​ ಠಾಕ್ರೆ

ಮುಂಬೈ: ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಅಕ್ರಮವಾಗಿ ವಲಸೆ ಬಂದಿರುವವರನ್ನು ಹೊರಹಾಕಬೇಕು ಎಂದು ಒತ್ತಾಯಿಸಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ವಣ ಸೇನೆ (ಎಂಎನ್​ಎಸ್) ಭಾನುವಾರ ‘ಮಹಾಮೋರ್ಚಾ’ ಬೃಹತ್ ರ‍್ಯಾಲಿ ನಡೆಸಿದೆ. ದಕ್ಷಿಣ ಮುಂಬೈನ ಹಿಂದು ಜಿಮ್ಖಾನಾ ಮೈದಾನದಿಂದ ಆರಂಭವಾದ ರ್ಯಾಲಿಯಲ್ಲಿ ಪಕ್ಷದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕಲ್ಯಾಣ್, ಥಾಣೆ, ನಾಸಿಕ್​ಗಳಿಂದಲೂ ಸಾವಿರಾರು ಕಾರ್ಯಕರ್ತರು ಆಗಮಿಸಿದ್ದರು. ವರ್ಧಮಾನ್ ಚೌಕದಲ್ಲಿನ ಆಜಾದ್ ಮೈದಾನದವರೆಗೆ ರ‍್ಯಾಲಿ ನಡೆಯಿತು.

ರ್ಯಾಲಿಗೆ ಚಾಲನೆ ನೀಡುವ ಮುನ್ನ ರಾಜ್ ಠಾಕ್ರೆ, ಪ್ರಭಾದೇವಿಯಲ್ಲಿರುವ ಸಿದ್ಧಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ್ದರು. ಪಾಕ್ ಮತ್ತು ಬಾಂಗ್ಲಾದ ಅಕ್ರಮ ನುಸುಳುಕೋರರಿಂದ ರಾಜ್ಯದ ಜನರು ಬೇಸತ್ತಿದ್ದಾರೆ. ಇವರನ್ನು ಹೊರಹಾಕಬೇಕು ಎಂಬುದು ಜನರ ಆಶಯ. ಹೀಗಾಗಿ ನಮ್ಮ ರ್ಯಾಲಿಗೆ ಅಭೂತಪೂರ್ವ ಬೆಂಬಲವ್ಯಕ್ತವಾಗಿದೆ ಎಂದು ಎಂಎನ್​ಎಸ್ ವಕ್ತಾರ ಸಂದೀಪ್ ದೇಶಪಾಡೆ ಹೇಳಿದ್ದಾರೆ.

ನಾವೇಕೆ ಆಶ್ರಯ ನೀಡಬೇಕು?

ಸಿಎಎ ಮತ್ತು ಎನ್​ಆರ್​ಸಿ ವಿರೋಧಿ ಹೋರಾಟಗಾರರಿಗೆ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ. ಸಿಎಎ ಬಗ್ಗೆ ಈಗ ಹೆಚ್ಚು ಚರ್ಚೆ ನಡೆಯುತ್ತಿದೆ. ಆದರೆ, ಹೊರದೇಶದಿಂದ ಬಂದವರಿಗೆ ನಾವೇಕೆ ಆಶ್ರಯ ನೀಡಬೇಕು ಎಂದು ರಾಜ್ ಪ್ರಶ್ನಿಸಿದ್ದಾರೆ.

ಸಿಎಎ ಪರ ಸ್ಪೀಕರ್

ಜೈಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತಂತೆ ರಾಜಸ್ಥಾನದಲ್ಲಿ ಸ್ಪೀಕರ್ ಮತ್ತು ಸರ್ಕಾರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದೆ. ರಾಜ್ಯದಲ್ಲಿ ಸಿಎಎಗೆ ಅವಕಾಶ ನೀಡುವುದಿಲ್ಲವೆಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಸಿಎಎ ಜಾರಿಗೆ ಸರ್ಕಾರ ವಿರೋಧ ಸಲ್ಲ ಎಂದು ವಿಧಾನಸಭೆಯ ಸ್ಪೀಕರ್ ಸಿ.ಪಿ. ಜೋಷಿ ಹೇಳಿದ್ದಾರೆ.

ಉದಯಪುರದ ಕಾಲೇಜೊಂದರಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸ್ಪೀಕರ್ ಜೋಷಿ, ರಾಜ್ಯ ಸರ್ಕಾರ ಸಿಎಎ ವಿರೋಧಿಸುವುದನ್ನು ಬಿಡಬೇಕು. ಪೌರತ್ವದ ವಿಷಯ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದಿದ್ದಾರೆ.ಸ್ಪೀಕರ್ ಹೇಳಿಕೆಯನ್ನು ರಾಜಸ್ಥಾನದ ಬಿಜೆಪಿ ಘಟಕ ಸ್ವಾಗತಿಸಿದೆ. ಸಿಎಎ ಪರವಾಗಿರುವ ಜೋಷಿಯವರಿಗೆ ಅಭಿನಂದನೆ ಹೇಳಿದೆ.