ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಭಾಗದಲ್ಲಿ ಪ್ರಥಮ ಬಾರಿಗೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸೌಲಭ್ಯಗಳೊಂದಿಗೆ ನರ(ನ್ಯೂರೋ) ಇಂಟರ್‌ವೆನ್ಶನ್ ಚಿಕಿತ್ಸಾ ಸೇವೆಗಳನ್ನು ಸಾರ್ವಜನಿಕರಿಗೆ ನೀಡಲು ಮುಂದಾಗಿದೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ಛೇರ್ಮನ್, ಎಂಎಲ್‌ಸಿ ಡಾ.ಧನಂಜಯ ಸರ್ಜಿ ಹೇಳಿದರು.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಕರ್ನಾಟಕದ ಐದಾರು ಜಿಲ್ಲೆಗಳಲ್ಲಿ ಈ ಚಿಕಿತ್ಸಾ ಸೌಲಭ್ಯವಿದ್ದು, ಇದೀಗ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೆದುಳು ಮತ್ತು ಬೆನ್ನುಹುರಿಯ ಹಲವಾರು ರೋಗಗಳಿಗೆ ಯಾವುದೇ ತೆರೆದ ಶಸ್ತ್ರಚಿಕಿತ್ಸೆ ಇಲ್ಲದೆಯೇ, ರಕ್ತನಾಳದ ಮೂಲಕ ಆಂಜಿಯೋಗ್ರಾಮ್ ಮಾದರಿ ಚಿಕಿತ್ಸೆ ನೀಡಲಾಗುತ್ತದೆ. ಹೃದಯಾಘಾತ ಅಥವಾ ಹೃದಯದ ರಕ್ತನಾಳದ ತೊಂದರೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ(ಓಪನ್ ಹಾರ್ಟ್ ಸರ್ಜರಿ) ಇಲ್ಲದೇ ಆಂಜಿಯೋಪ್ಲಾಸ್ಟಿ ಅಥವಾ ಸ್ಟೆಂಟಿಂಗ್ ಮಾದರಿ ಮೆದುಳಿನ ರಕ್ತನಾಳಗಳ ಚಿಕಿತ್ಸೆಯನ್ನೂ ಮಾಡಲಾಗುತ್ತದೆ ಎಂದರು.
ಮೆದುಳಿನಲ್ಲಿ ರಕ್ತಸ್ರಾವ ಅಥವಾ ರಕ್ತ ಸಂಚಾರ ಕಡಿತವಾಗಿ ಸ್ಟೋಕ್ (ಪಾರ್ಶ್ವವಾಯು) ಆದಾಗ ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ಅಥವಾ ಅಂಜಿಯೋಗ್ರಾಮ್ ಮಾಡಿ ರಕ್ತನಾಳಗಳಲ್ಲಿನ ದೋಷ ಪತ್ತೆ ಮಾಡಲಾಗುತ್ತದೆ. ರಕ್ತನಾಳದಲ್ಲಿ ದೋಷ ಕಂಡುಬಂದಲ್ಲಿ ಸಾಮಾನ್ಯವಾಗಿ ಮೆದುಳಿನ ಸರ್ಜರಿ ಮಾಡಬೇಕಾಗಬಹುದು. ಇಂತಹ ತೊಂದರೆಗಳನ್ನು ಸರ್ಜರಿ ಇಲ್ಲದೇ ಆಂಜಿಯೋಪ್ಲಾಸ್ಟಿ ಅಥವಾ ಕಾಯ್ಲಿನ್ಸ್ ಮಾಡಿ ಗುಣಪಡಿಸಬಹುದು. ಈ ಚಿಕಿತ್ಸಾ ವಿಧಾನವು ಸರ್ಜರಿಗೆ ಹೋಲಿಸಿದರೆ ಬಹಳ ಸುರಕ್ಷಿತ ಹಾಗೂ ಬೇಗ ಚೇತರಿಸಿಕೊಳ್ಳುವರು ಎಂದು ತಿಳಿಸಿದರು.
ನ್ಯೂರೋಲಜಿಸ್ಟ್ ಡಾ. ಪ್ರಶಾಂತ್ ಮಾತನಾಡಿ, ಮೆದುಳಿಗೆ ಸರಬರಾಜು ಮಾಡುವ ರಕ್ತನಾಳದ ಮುಚ್ಚುವಿಕೆಯಿಂದ ಪಾರ್ಶ್ವವಾಯು ಉಂಟಾಗುತ್ತದೆ. ದೊಡ್ಡ ನಾಳದ ಮುಚ್ಚುವಿಕೆಯ ಸಂದರ್ಭದಲ್ಲಿ, ರೋಗಿಯು ಚಿಕಿತ್ಸೆಯಿಲ್ಲದೆ ಸಾವು ಅಥವಾ ಕೋಮಾಗೆ ಕಾರಣವಾಗಬಹುದು. ಸ್ಟೋಕ್ ಆಗಿ ಶುರುವಿನ ಕೆಲವು ಗಂಟೆಗಳಲ್ಲಿ ರೋಗಿ ಆಸ್ಪತ್ರೆ ತಲುಪಿದರೆ, ಥಾಂಬೆಕ್ಟಮಿ ಕಾರ್ಯವಿಧಾನದಿಂದ ರಕ್ತನಾಳದ ತಡೆ ತೆಗೆದು ಸಂಪೂರ್ಣ ಗುಣವಾಗುವ ಸಂಭವ ಇರುತ್ತದೆ. ಈ ವಿಧಾನವು ಪಾರ್ಶ್ವವಾಯು ರೋಗಿಗಳಲ್ಲಿ ಭರವಸೆ ಕಿರಣವಾಗಿದೆ ಎಂದು ಹೇಳಿದರು. ಸರ್ಜಿ ಆಸ್ಪತ್ರೆಗಳ ಸಮೂಹದ ವೈದ್ಯಕೀಯ ಅಧೀಕ್ಷಕ ಡಾ.ವಾದಿರಾಜ ಕುಲಕರ್ಣಿ, ಆಡಳಿತಾಧಿಕಾರಿ ಕೆ.ಆರ್.ಪುರುಷೋತ್ತಮ್ ಸುದ್ದಿಗೋಷ್ಠಿಯಲ್ಲಿದ್ದರು.
ಮೆದುಳಿನ ರಕ್ತಸ್ರಾವಕ್ಕೆ ತ್ವರಿತ ಚಿಕಿತ್ಸೆ ಮೆದುಳಿನಲ್ಲಿ ರಕ್ತಸ್ರಾವವಾದರೆ ರಕ್ತನಾಳದಲ್ಲಿ ತಡೆ ಉಂಟಾಗಿ ಮೆದುಳಿಗೆ ರಕ್ತ ಸಂಚಾರ ಕಡಿತವಾಗಲಿದೆ. ರಕ್ತನಾಳದ ಗುಳ್ಳೆ ಅಥವಾ ಉರಿಯೂತವು ಮೆದುಳಿನ ರಕ್ತನಾಳದಲ್ಲಿ ಬಲೂನ್ ತರಹದ ಊತವಾಗಿದ್ದು, ಇದು ಛಿದ್ರವಾಗಬಹುದು ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು. ಮರು ರಕ್ತಸ್ರಾವದ ಹೆಚ್ಚಿನ ಅಪಾಯವಿರುವುದರಿಂದ ಇಂತಹ ರೋಗಿಗಳಿಗೆ ವೇಗವಾಗಿ ಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ನ್ಯೂರೋ ಸರ್ಜನ್ ಡಾ. ಸಿ.ಹರೀಶ್ ಹೇಳಿದರು.
ಮೆದುಳು ಅಥವಾ ಬೆನ್ನುಹುರಿಯ ಸಣ್ಣ ಸಮಸ್ಯೆಗಳು ಮತ್ತು ಕಷ್ಟಕರ ಸ್ಥಳಗಳನ್ನು ಸಹ ಈ ವಿಧಾನದಿಂದ ಸುಲಭವಾಗಿ ತಲುಪಬಹುದು ಮತ್ತು ಚಿಕಿತ್ಸೆ ನೀಡಬಹುದು. ಅದಲ್ಲದೇ ಮಕ್ಕಳು, ವಯೋವೃದ್ಧರು, ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು, ಅರವಳಿಕೆ ಹಾಗೂ ಸರ್ಜರಿಗೆ ಯೋಗ್ಯವಲ್ಲದವರಲ್ಲೂ ಈ ಚಿಕಿತ್ಸೆ ಮಾಡಬಹುದು. - ಡಾ.ಧನಂಜಯ ಸರ್ಜಿ, ಸರ್ಜಿ ಸಮೂಹ ಸಂಸ್ಥೆಗಳ ಛೇರ್ಮನ್