ನ್ಯೂಸ್

ಟ್ರಂಪ್ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ ನೆತನ್ಯಾಹು| nobel-peace-prize

ವಾಷಿಂಗ್ಟನ್; ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ (07) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಶಾಂತಿ ಒಪ್ಪಂದಗಳನ್ನು ಮಾಡುವಲ್ಲಿ ಅವರ ಪಾತ್ರವನ್ನು ಉಲ್ಲೇಖಿಸಲಾಗಿದ್ದು, ಶ್ವೇತಭವನದಲ್ಲಿ ಟ್ರಂಪ್ ಆಯೋಜಿಸಿದ್ದ ಭೋಜನಕೂಟದಲ್ಲಿ ನೆತನ್ಯಾಹು ನಾಮನಿರ್ದೇಶನ ಪತ್ರದ ಪ್ರತಿಯನ್ನು ಹಸ್ತಾಂತರಿಸಿದರು.

ಈ ಬಗ್ಗೆ ನೆತನ್ಯಾಹು ಮಾತನಾಡಿದ್ದು, ಅಧ್ಯಕ್ಷರು ಈಗಾಗಲೇ ಉತ್ತಮ ಅವಕಾಶಗಳನ್ನು ಹೊಂದಿದ್ದಾರೆ. ಅವರು ಅಬ್ರಹಾಂ ಒಪ್ಪಂದಗಳನ್ನು ರಚಿಸಿದರು. ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಸೇರಿದಂತೆ ಜಗತ್ತಿನಾದ್ಯಂತದ ಸಂಘರ್ಷಗಳನ್ನು ಕೊನೆಗೊಳಿಸಲು ಅವರು ಮಾಡಿದ ಪ್ರಯತ್ನಗಳಿಗೆ ಇದು ಅರ್ಹವಾಗಿದೆ. ಅವರು ಶಾಂತಿಯನ್ನು ರೂಪಿಸುತ್ತಿದ್ದಾರೆ ಎಂದು ಹೇಳಿದರು. ಹಾಗಾಗಿ ಅಧ್ಯಕ್ಷರೇ, ನಾನು ನೊಬೆಲ್ ಪ್ರಶಸ್ತಿ ಸಮಿತಿಗೆ ಕಳುಹಿಸಿದ ಪತ್ರವನ್ನು ನಿಮಗೆ ನೀಡಲು ಬಯಸುತ್ತೇನೆ. ಇದು ಶಾಂತಿ ಪ್ರಶಸ್ತಿಗೆ ನಿಮ್ಮನ್ನು ನಾಮನಿರ್ದೇಶನ ಮಾಡುತ್ತಿದೆ ಎಂದರು.

(ಏಜೆನ್ಸೀಸ್)

ಭೋಜನಕೂಟದ ಸಮಯದಲ್ಲಿ ನೆತನ್ಯಾಹು ಟ್ರಂಪ್ ಅವರ ಜಾಗತಿಕ ನಾಯಕತ್ವವನ್ನು, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದರು. ನಿಮ್ಮ ನಾಯಕತ್ವ ಮತ್ತು ಶಾಂತಿಯ ಅನ್ವೇಷಣೆಗಾಗಿ ಎಲ್ಲಾ ಇಸ್ರೇಲಿಗಳಷ್ಟೇ ಅಲ್ಲ, ಯಹೂದಿ ಜನರು ಮತ್ತು ಪ್ರಪಂಚದಾದ್ಯಂತದ ಅನೇಕ ಅಭಿಮಾನಿಗಳ ಮೆಚ್ಚುಗೆಯನ್ನು ನಾನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಟ್ರಂಪ್​, ನೆತನ್ಯಾಹು ಅವರಿಗೆ ಧನ್ಯವಾದ ತಿಳಿಸಿದರು. ಈ ವಿಚಾರ ನನಗೆ ತಿಳಿದಿರಲಿಲ್ಲ. ವಾಹ್ ತುಂಬಾ ಧನ್ಯವಾದಗಳು. ನಿಮ್ಮಿಂದ ಇದು ಬರುತ್ತಿರುವುದರಿಂದ ಇದು ತುಂಬಾ ಅರ್ಥಪೂರ್ಣವಾಗಿದೆ ಎಂದು ಟ್ರಂಪ್​ ಸಂತಸ ಹೊರಹಾಕಿದರು.