ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ನಿಮ್ಮನೆ ಚಂದ್ರು ಅವರ ಸರಳ ಅಡುಗೆ ರೆಸಿಪಿಗಳು ಸಖತ್ ವೈರಲ್ ಆಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ದೇಶ ವಿದೇಶಗಳಲ್ಲಿ ಚಂದ್ರು ಅವರು ಮಾಡಿರುವ ರೆಸಿಪಿಗಳನ್ನು ಜನ ಟ್ರೈ ಮಾಡುತ್ತಿದ್ದಾರೆ. ಹೋಟೆಲ್ ಮಾತ್ರವಲ್ಲದೇ ಸಿನಿಮಾಗಳ ಪ್ರಮೋಷನ್ನಲ್ಲಿ ಬ್ಯುಸಿ ಇರುವ ಚಂದ್ರು ಅವರು ವಿಜಯವಾಣಿ ವಿಶೇಷ ಸಂದರ್ಶನದಲ್ಲಿ ತಾವು ನಡೆದ ಬಂದ ಹಾದಿ ಬಗ್ಗೆ ಹಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮೊದಲಿಗೆ ಮೇಕ್ಅಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರು ಅಚಾನಕ್ ಆಗಿ ಹೋಟೆಲ್ ಬ್ಯುಸಿನೆಸ್ಗೆ ಬಂದಿದ್ದಾಗಿ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಆದರೆ, ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಎಂಬ ಕುತೂಹಲ ಹಲವರಲ್ಲಿ ಮೂಡಿದ್ದು, ಈ ಬಗ್ಗೆ ಚಂದ್ರು ಕೊಟ್ಟ ಉತ್ತರ ಹೀಗಿದೆ.
ನಾನು ಯಾವುದೇ ಆಸ್ತಿಯನ್ನು ಮಾಡಿಲ್ಲ. ಫುಟ್ಪಾತ್ನಿಂದ ಶುರುವಾದ ವ್ಯಾಪಾರ ಇಂದು ದೊಡ್ಡ ಹೋಟೆಲ್ವರೆಗೆ ಬಂದು ನಿಂತಿದೆ ಅದೇ ನಾನು ಮಾಡಿರುವ ಆಸ್ತಿ. ಭಗವಂತ ಹಾಗೂ ಜನರ ಆಶೀರ್ವಾದ ನನ್ನ ಮೇಲೆ ಇದ್ದರೆ ಮುಂದಿನ ದಿನಗಳಲ್ಲಿ ಆಸ್ತಿ ಮಾಡುತ್ತೇನೆ. ನಾನು ಯಾವುದೇ ಪ್ರಮೋಷನ್ ಮಾಡಿದರು ಅದಕ್ಕೆ ದುಡ್ಡು ತೆಗೆದುಕೊಂಡಿಲ್ಲ. ಶ್ರಮ ಹಾಕುತ್ತಿದ್ದೇನೆ ಅದಕ್ಕೆ ದೇವರು ಪ್ರತಿಫಲ ಕೊಟ್ಟಿದ್ದಾನೆ ಅಷ್ಟೇ.
ನಾನು ಆಗರ್ಭ ಶ್ರೀಮಂತ ಚಿಕ್ಕ ವಯಸ್ಸಿನಿಂದಲೂ ದುಡ್ಡು ನೋಡಿದ್ದೇನೆ. ಅದನ್ನೆಲ್ಲಾ ಬಿಟ್ಟು ಸಿನಿಮಾ ಫೀಲ್ಡ್ಗೆ ಬಂದೆ. ನಾನು ಸ್ವಂತವಾಗಿ ನಿಂತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಮೊದಲಿಗೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಇದಕ್ಕೆ ವಿರೋಧಿಸಿದ್ದರು. ಆದರೆ, ನಾನು ನನ್ನ ಸ್ವಂತ ಪರಿಶ್ರಮದಿಂದ ಬೆಳೆದಿದ್ದೇನೆ. ನಾನು ನನ್ನ ಸ್ವಂತ ಮನೆಯನ್ನು ಮಾರಾಟ ಮಾಡಿ ಈ ಹೋಟೆಲ್ಅನ್ನು ನಡೆಸುತ್ತಿದ್ದೇನೆ.
ಜನರು ಕೊಟ್ಟಿರುವ ಪ್ರೀತಿ ವಿಶ್ವಾಸದಿಂದ ನಾನು ಇವತ್ತೂ ಹೋಟೆಲ್ ಮಾಡಿದ್ದೇನೆ. ಜನರು ಹೀಗೆ ಪ್ರೀತಿಯನ್ನು ಕೊಟ್ಟರೆ ಮುಂದಿನ ದಿನಗಳಲ್ಲಿ ಆಸ್ತಿ ಹಾಗೂ ಇನ್ನೂ ದೊಡ್ಡ ಹೋಟೆಲ್ಅನ್ನು ಮಾಡುತ್ತೇನೆ. ನನ್ನ ಬಳಿ ಪ್ರಸ್ತುತ ಆಸ್ತಿ ಏನಾದರೂ ಇದ್ದರೆ ಅದು ಈ ಹೋಟೆಲ್ ಮಾತ್ರ ಇದನ್ನು ಹೊರತುಪಡಿಸಿ ನನ್ನ ಬಳಿ ಬೇರೇನೂ ಇಲ್ಲ. ನಾನು 32 ವರ್ಷಗಳಿಂದ ಈ ಫೀಲ್ಡ್ನಲ್ಲಿದ್ದು, ಬೆಳ್ಳುಳ್ಳಿ ಕಬಾಬ್ ವೈರಲ್ ಆದ ನಂತರ ಬ್ಯುಸಿನೆಸ್ನಲ್ಲಿ ಒಂದು ಶೇ.30ರಷ್ಟು ಬೆಳವಣಿಗೆಯಾಗಿದೆ. ಆದರೆ, ನಾನು ಯಾವುದೇ ಆಸ್ತಿಯನ್ನು ಮಾಡಿಲ್ಲ ಎಂದು ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ನಿಮ್ಮನೆ ಚಂದ್ರು ಅವರು ವಿಜಯವಾಣಿ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.