Nepo Kids: ಪ್ರಸ್ತುತ, ನೇಪಾಳದಲ್ಲಿ ಭುಗಿಲೆದ್ದ ಪ್ರತಿಭಟನೆ ದೊಡ್ಡ ಹಿಂಸಾಚಾರಕ್ಕೆ ತಿರುಗಿ, 30ಕ್ಕೂ ಹೆಚ್ಚು ಮಂದಿಯ ಪ್ರಾಣವನ್ನು ಕಸಿದುಕೊಂಡಿರುವುದು ಗೊತ್ತೇ ಇದೆ. ಪ್ರತಿಭಟನಾಕಾರರು ನೇಪಾಳ ಪ್ರಧಾನಿ ಮತ್ತು ರಾಷ್ಟ್ರಪತಿ ಮನೆಗೆ ಬೆಂಕಿ ಹಚ್ಚಿದ್ದಲ್ಲದೇ, ಮಾಜಿ ಪ್ರಧಾನಿಗಳ ಪತ್ನಿಯ ಸಾವಿಗೆ ಕಾರಣರಾದರು. ಇದರೊಟ್ಟಿಗೆ ಹಣಕಾಸು ಸಚಿವರನ್ನು ನಡುರಸ್ತೆಯಲ್ಲೇ ಅಟ್ಟಾಡಿಸಿ ಥಳಿಸಿದ ದೃಶ್ಯಗಳು ಇಡೀ ಜಗತ್ತನ್ನು ಒಂದು ನಿಮಿಷ ಭಾರೀ ಅಚ್ಚರಿಗೆ ದೂಡಿತು ಎಂಬುದರಲ್ಲಿ ಅನುಮಾನವೇ ಬೇಡ. ಕೇವಲ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಿದ್ದಕ್ಕೆ ಕುಪಿತಗೊಳ್ಳದ ಯುವಜನತೆ, ರಾಜಕಾರಣಿ ಮಕ್ಕಳು ನಡೆಸುತ್ತಿರುವ ಲಕ್ಸುರಿ ಜೀವನಶೈಲಿ ಕಂಡು ಕೆರಳಿದ್ದಾರೆ ಎಂಬುದು ಸ್ಪಷ್ಟ.
ಜೆನ್ಝಿ ಪ್ರತಿಭಟನೆಯ ತೀವ್ರತೆಗೆ ಪ್ರಧಾನಿ ಕೆ.ಪಿ. ಶರ್ಮ ಓಲಿ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸುವ ಮೂಲಕ ಹಿಂದೆ ಸರಿದರು. ಇದು ಸರ್ಕಾರ ಪತನಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ದಮನ ಕಾರ್ಯಾಚರಣೆಯಲ್ಲಿ ಕನಿಷ್ಠ 31 ಮಂದಿ ಸಾವನ್ನಪ್ಪಿದ್ದು, 1,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಯುವಜನತೆಯ ಆಕ್ರೋಶದ ಕಿಚ್ಚಿಗೆ ನೇಪಾಳದ ಸರ್ಕಾರಿ ಕಟ್ಟಡಗಳು, ಹಿರಿಯ ರಾಜಕಾರಣಿಗಳ ಖಾಸಗಿ ನಿವಾಸಗಳು ಮತ್ತು ಪ್ರವಾಸಿ ಕೇಂದ್ರಗಳಲ್ಲಿರುವ ಹೋಟೆಲ್‌ಗಳು ಸಹ ಬೆಂಕಿಗೆ ಆಹುತಿಯಾಗಿವೆ. ನೇಪಾಳದ ಸಂಸತ್ತು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಇಂದು, ದೇಶವು ಕಾರ್ಯನಿರ್ವಹಿಸುವ ಸರ್ಕಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಕರ್ಫ್ಯೂ ವಿಧಿಸಲು ಮತ್ತು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಸ್ವತಃ ಸೇನೆಯೇ ಮಧ್ಯಪ್ರವೇಶಿಸಿದೆ.
ಒಂದೆಡೆ ದೇಶದಲ್ಲಿ ಸಾಮಾನ್ಯ ನಿವಾಸಿಗಳು ನಿರುದ್ಯೋಗ, ಏರುತ್ತಿರುವ ಹಣದುಬ್ಬರ ಮತ್ತು ತೀವ್ರ ಬಡತನದಿಂದ ಬಳಲುತ್ತಿದ್ದರೆ, ಅತ್ತ ರಾಜಕಾರಣಿ ಮಕ್ಕಳು ಜಾಲತಾಣಗಳಲ್ಲಿ ತಾವು ಅನುಭವಿಸುತ್ತಿರುವ ಐಷಾರಾಮಿ ಜೀವನವನ್ನು ಎಲ್ಲರ ಎದುರು ಪ್ರದರ್ಶಿಸಿರುವುದು ಜೆನ್ಝಿ ಕೆಂಗಣ್ಣಿಗೆ ಗುರಿಯಾಗಿದೆ. ರಾಜಕೀಯ ನಾಯಕರ ಮಕ್ಕಳು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ದುಬಾರಿ ಮೌಲ್ಯದ ಕಾರುಗಳು, ಡಿಸೈನರ್ ಹ್ಯಾಂಡ್‌ಬ್ಯಾಗ್‌ಗಳು ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಿರುವುದು ಯುವಜನತೆಯ ಪ್ರತಿಭಟನೆಗೆ ಒಂದು ಬಲವಾದ ಕಾರಣವಾಗಿದೆ.
ಹಿಂಸಾಚಾರದ ಪ್ರತಿಭಟನೆ ಹತೋಟಿಗೆ ಬರದ ಹಿನ್ನೆಲೆ ಪ್ರಧಾನಿ ತಮ್ಮ ಪಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಕ್ಕೂ ಮೊದಲು ಹಿರಿಯ ಮಂತ್ರಿಗಳು ರಾಜೀನಾಮೆ ಘೋಷಿಸಿ, ಸರ್ಕಾರದಿಂದ ಹೊರನಡೆದಿದ್ದರು. ಈ ಬೆಳವಣಿಗೆಯಿಂದ ಪ್ರಸ್ತುತ ನೇಪಾಳ ಪ್ರಧಾನಿ ಇಲ್ಲದ ದೇಶವಾಗಿ ಸಾಗುತ್ತಿರುವುದು ನಿಜಕ್ಕೂ ದುರಂತವೇ,(ಏಜೆನ್ಸೀಸ್).