ನ್ಯೂಸ್

ಭಾರತದ ಭೂಪ್ರದೇಶವೂ ತನ್ನದೇ ಎಂಬ ನಕ್ಷೆಗೆ ನೇಪಾಳ ಸಂಸತ್ತು ಅನುಮೋದನೆ!

ಕಾಠ್ಮಂಡು: ಭಾರತೀಯ ಭೂ ಪ್ರದೇಶಗಳಾದ ಲಿಂಪಿಯಧುರ, ಲಿಪುಲೇಖ್ ಹಾಗೂ ಕಾಲಾಪಾನಿ ಪ್ರದೇಶಗಳನ್ನು ಒಳಗೊಂಡ ವಿವಾದಿತ ಗಡಿ ನಕ್ಷೆಗೆ ನೇಪಾಳ ಸಂಸತ್ತು ಅನುಮೋದನೆ ನೀಡಿದೆ.

ಭಾರತದ ಪ್ರಸ್ತಾವನೆಯನ್ನು ಕಡೆಗಣಿಸಿ ಏಕಪಕ್ಷೀಯವಾಗಿ ನೇಪಾಳ ನವೀಕೃತ ನಕ್ಷೆಯನ್ನು ಅನುಮೋದಿಸಿದೆ. ಭೂ ಪ್ರದೇಶಗಳನ್ನು ಈ ನಕ್ಷೆಯಲ್ಲಿ ನೇಪಾಳ ತನ್ನದೆಂದು ಪ್ರತಿಪಾದಿಸಿದೆ.

ಈ ಪ್ರದೇಶಗಳನ್ನು ಒಳಗೊಂಡ ಪರಿಷ್ಕೃತ ರಾಜಕೀಯ ಭೂಪಟಕ್ಕೆ ಅವಕಾಶ ಕಲ್ಪಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ನೇಪಾಳ ಸಂಸತ್ತಿನ ಕೆಳಮನೆ ಸರ್ವಾನುಮತದಿಂದ ಅಂಗೀಕರಿಸಿದೆ. ಈ ಮೂಲಕ ಭಾರತದೊಂದಿಗೆ ಇದೇ ಮೊದಲ ಬಾರಿಗೆ ನೇಪಾಳ ಗಡಿ ವಿವಾದವನ್ನು ಅಧಿಕೃತಗೊಳಿಸಿದೆ.

ಸದನದಲ್ಲಿ ಹಾಜರಿದ್ದ ನೇಪಾಳಿ ಕಾಂಗ್ರೆಸ್(ಎನ್ ಸಿ), ರಾಷ್ಟ್ರೀಯ ಜನತಾ ಪಾರ್ಟಿ-ನೇಪಾಳ್(ಆರ್ ಜೆ ಪಿ-ಎನ್) ಹಾಗೂ ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿ(ಆರ್ ಪಿ ಪಿ) ಸೇರಿದಂತೆ ನೇಪಾಳ ಪ್ರತಿಪಕ್ಷಗಳ 57 ಸದಸ್ಯರು ಹೊಸ ನಕ್ಷೆಯ ಪರವಾಗಿ ಮತ ಚಲಾಯಿಸಿದರು. ಸಂವಿಧಾನ ತಿದ್ದುಪಡಿ ಮಸೂದೆಯ ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕಾರಗೊಂಡಿದೆ. ಈ ಮೂಲಕ ಓಲಿ ಸರ್ಕಾರದ ನಕ್ಷೆ ಬದಲಾವಣೆ ನಿರ್ಣಯಕ್ಕೆ ಒಮ್ಮತದ ಬೆಂಬಲ ಸೂಚಿಸಲಾಯಿತು ಎಂದು ಸ್ಪೀಕರ್ ಅಗ್ನಿ ಸಪ್ಕೋಟಾ ಪ್ರಕಟಿಸಿದರು.

ಇದಕ್ಕೂ ಮೊದಲು ನೇಪಾಳ ಸಂಪುಟ ಮೇ 20ರಂದು ಭಾರತೀಯ ಪ್ರದೇಶಗಳನ್ನು ಒಳಗೊಂಡ ಹೊಸ ಆಡಳಿತಾತ್ಮಕ ಭೂಪಟಕ್ಕೆ ಒಪ್ಪಿಗೆ ಸೂಚಿಸಿತ್ತು. ಮಸೂದೆಯನ್ನು ದೇಶದ ಸಂಸತ್ತಿನ ಮೇಲ್ಮನೆಯಾಗಿರುವ ನ್ಯಾಷನಲ್ ಅಸೆಂಬ್ಲಿ ಅನುಮೋದನೆ ಪಡೆದುಕೊಳ್ಳುವ ಆಗತ್ಯವಿದೆ. ನಂತರ ದೇಶದ ಅಧ್ಯಕ್ಷರು ಇದಕ್ಕೆ ಅಂಕಿತ ಹಾಕಿದ ನಂತರ ಅದು ಜಾರಿಗೆ ಬರಲಿದೆ.

ನೇಪಾಳ ಸಶಸ್ತ್ರ ಪೊಲೀಸ್ ಪಡೆ- ಎನ್ ಎಪಿ ಎಫ್ ಬಿಹಾರದ ಸೀತಾಮಾರ್ಹಿ ಜಿಲ್ಲೆಯ ಗಡಿಯಲ್ಲಿ ಒಬ್ಬ ಭಾರತೀಯನ ಹತ್ಯೆ ಮಾಡಿ, ಇತರ ಇಬ್ಬರನ್ನು ಗಾಯಗೊಳಿಸಿ, ಉಳಿದವರನ್ನು ಬಂಧಿಸಿದ ದಿನದ ನಂತರ ನೇಪಾಳ ಸಂಸತ್ತು ಪರಿಷ್ಕೃತ ಭೂಪಟಕ್ಕೆ ಒಪ್ಪಿಗೆ ಸೂಚಿಸಿದೆ.

ನೇಪಾಳದ ನಕ್ಷೆ ಬದಲಾವಣೆ ಕ್ರಮವನ್ನು ಈಗಾಗಲೇ ತಳ್ಳಿ ಹಾಕಿರುವ ಭಾರತ, ಐತಿಹಾಸಿಕ ಪುರಾವೆಗಳಿಲ್ಲದೇ ಏಕಪಕ್ಷೀಕಯವಾಗಿ ನಕ್ಷೆ ಬದಲಿಸಿರುವ ನೇಪಾಳದ ಕ್ರಮವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು. (ಏಜೆನ್ಸೀಸ್​)