ಕಿಶನ್ಗಂಜ್: ಗಡಿಭಾಗದಲ್ಲಿ ಪಾಕಿಸ್ತಾನ, ಚೀನೀಯರಷ್ಟೇ ಅಲ್ಲ, ನೇಪಾಳದವರೂ ಗುಂಡು ಹಾರಿಸೋದಕ್ಕೆ ಶುರುಮಾಡಿದ್ರು! ಬಿಹಾರದ ಕಿಶನ್ಗಂಜ್ ಪ್ರದೇಶದಲ್ಲಿರುವ ಭಾರತ- ನೇಪಾಳದ ಗಡಿಯಲ್ಲಿ ನೇಪಾಳ ಪೊಲೀಸರು ಮೂವರು ಭಾರತೀಯರ ಮೇಲೆ ಗುಂಡು ಹಾರಿಸಿದ ಪರಿಣಾಮ ಒಬ್ಬ ಗಾಯಗೊಂಡಿದ್ದಾನೆ.
ಉಭಯ ದೇಶಗಳ ನಡುವೆ ಸಂಬಂಧ ಅಷ್ಟೇನೂ ಹಿತವಲ್ಲದೇ ಇರುವ ಈ ಸಂದರ್ಭದಲ್ಲೂ ನೇಪಾಳ ಪೊಲೀಸರು ಈ ರೀತಿ ಸಾಹಸಕ್ಕೆ ಕೈ ಹಾಕಿರುವುದು ಈಗ ಎಲ್ಲರ ಹುಬ್ಬೇರಿಸಿದೆ. ಕಿಶನ್ಗಂಜ್ನ ಮಾಫಿ ತೋಲಾ ಎಂಬಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮೂವರು ಸ್ಥಳೀಯರಾಗಿದ್ದು ಕಳೆದು ಹೋಗಿದ್ದ ಹಸುವನ್ನು ಹುಡುಕುತ್ತ ಗಡಿ ಭಾಗಕ್ಕೆ ಹೋಗಿದ್ದರು. ಆಗ ನೇಪಾಳ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿಯ ಮಾಹಿತಿ ಸಿಕ್ಕ ಕೂಡಲೇ ಸೀಮಾ ಸುರಕ್ಷಾ ಬಲದ ಯೋಧರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹದಗೆಡದಂತೆ ನೋಡಿಕೊಂಡಿದ್ದಾರೆ. ಭಾರತ ಮತ್ತು ನೇಪಾಳ ಗಡಿ ಕರೊನಾ ವೈರಸ್ ಕಾರಣಕ್ಕೆ ಈಗಾಗಲೇ ಬಂದ್ ಆಗಿದ್ದು, ಯಾರೂ ಗಡಿ ದಾಟಿ ಹೋಗಿಲ್ಲ. ಆದರೂ ಈ ದಾಳಿ ಯಾಕೆ ನಡೆಯಿತು ಎಂಬ ಬಗ್ಗೆ ತನಿಖೆ ಶುರುವಾಗಿದೆ. (ಏಜೆನ್ಸೀಸ್)