ಕಾಠ್ಮಂಡು: ಭಾರತೀಯ ಪ್ರದೇಶಗಳನ್ನು ಒಳಗೊಂಡಂತೆ ಸಂಸತ್ನ ಕೆಳಮನೆಯಲ್ಲಿ ಪರಿಷ್ಕೃತ ನಕ್ಷೆಗೆ ಅನುಮೋದನೆ ಪಡೆದಿರುವ ನೇಪಾಳ, ಮೇಲ್ಮನೆಯಲ್ಲೂ ಅನುಮೋದನೆ ಪಡೆದುಕೊಳ್ಳುವ ತರಾತುರಿ ತೋರುತ್ತಿದೆ. ಇದರಿಂದಾಗಿ ಉಭಯ ರಾಷ್ಟ್ರಗಳ ನಡುವಿನ ತಿಕ್ಕಾಟ ತಾರಕಕ್ಕೇರುವ ಲಕ್ಷಣಗಳು ಕಾಣಿಸುತ್ತಿವೆ.
ಇದೇ ವೇಳೆ, ಇದೀಗ ತನ್ನದು ಎಂದು ಸೇರಿಸಿಕೊಂಡಿರುವ ವಿವಾದಾತ್ಮಕ ಪ್ರದೇಶಗಳಾದ ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಸೇರಿ ಗಡಿಭಾಗದಲ್ಲಿರುವ ತನ್ನ ಗಡಿ ಹೊರಠಾಣೆಗಳ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸಿಕೊಳ್ಳುವ ಪ್ರಯತ್ನ ಜಾರಿಯಲ್ಲಿಟ್ಟಿದೆ. ಇದಕ್ಕೆ ಪೂರಕವಾಗಿ ಹಾಲಿ ಇರುವ 121 ಗಡಿ ಹೊರಠಾಣೆಗಳಿಗೆ ಹೊಸದಾಗಿ 100 ಹೊರಠಾಣೆಗಳನ್ನು ಸ್ಥಾಪಿಸಲು ಅದು ಮುಂದಾಗಿದೆ.
ಈ ವಿಷಯವನ್ನು ಖಚಿತಪಡಿಸಿರುವ ನೇಪಾಳದ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ವಕ್ತಾರ ಕೇದಾರನಾಥ್ ಶರ್ಮ, ಪ್ರಸಕ್ತ ವಿತ್ತೀಯ ವರ್ಷದಲ್ಲಿ ಭಾರತದ ಗಡಿಯುದ್ದಕ್ಕೂ ಹೊಸದಾಗಿ 100 ಗಡಿ ಹೊರಠಾಣೆಗಳನ್ನು ನಿರ್ಮಿಸುವ ಮೂಲಕ ಗಡಿ ಹೊರಠಾಣೆಗಳ ಸಂಖ್ಯೆಯನ್ನು 221ಕ್ಕೆ ಹೆಚ್ಚಿಸಲಾಗುತ್ತಿದೆ. ಆದರೆ, ಮುಂದಿನ ಯೋಜನೆಗಳ ಬಗ್ಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಭಾರತ-ನೇಪಾಳ ಗಡಿ ವಿಭಾಗದ ಭದ್ರತೆಗಾಗಿ ನಿಯೋಜನೆಗೊಂಡಿರುವ ನೇಪಾಳದ ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ಅಧಿಕಾರಿಗಳು ಹೊಸದಾಗಿ 100 ಗಡಿ ಹೊರಠಾಣೆಗಳ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ದೊರೆತಿದೆ. ಇವುಗಳ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸುವ ಪ್ರಸ್ತಾವನೆಯೂ ಇದೆ ಎಂದು ಹೇಳಿದ್ದಾರೆ.