ನ್ಯೂಸ್

ನೇಪಾಳ ಗಡಿಯಲ್ಲಿ ಭಾರತೀಯರ ಮೇಲೆ ಗುಂಡಿನ ದಾಳಿ, ಒಬ್ಬನ ಸಾವು

ಪಟನಾ: ಭಾರತ ಮತ್ತು ನೇಪಾಳ ಗಡಿಭಾಗದಲ್ಲಿರುವ ಲಾಲ್​ಬಂದಿ ಗಡಿ ಹೊರಠಾಣೆಯ ವ್ಯಾಪ್ತಿಯಲ್ಲಿ ನೇಪಾಳ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಭಾರತದ ಒಬ್ಬ ನಾಗರಿಕ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಮತ್ತೊಬ್ಬನನ್ನು ನೇಪಾಳ ಸಶಸ್ತ್ರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಹೇಳಲಾಗುತ್ತಿದೆ.

ದಿನೇಶ್​ ಕುಮಾರ್​ (25) ಮೃತ. ಉಮೇಶ್​ ರಾಮ್​ ಮತ್ತು ಉದಯ್​ ಠಾಕೂರ್​ ಗಾಯಗೊಂಡವರು. ಉಮೇಶ್​ ರಾಮ್​ನ ಬಲಗೈಗೆ ಗಾಯವಾಗಿದ್ದರೆ, ಒಂದು ಗುಂಡು ಉದಯ್​ ಠಾಕೂರ್​ನ ತೊಡೆಯನ್ನು ಹೊಕ್ಕಿದೆ ಎನ್ನಲಾಗಿದೆ. ಲಗನ್​ ರಾಯ್​ ಎಂಬಾತನನ್ನು ನೇಪಾಳ ಸಶಸ್ತ್ರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಹೇಳಲಾಗುತ್ತಿದೆ.

ಶುಕ್ರವಾರ ಬೆಳಗ್ಗೆ 8.45ರಲ್ಲಿ ಗಡಿ ಭಾಗದ ಸೀತಾಮಾರಿ ಜಿಲ್ಲೆಯ ಜಾನಕಿನಗರ ಗ್ರಾಮದ ಈ ಯುವಕರು ನೇಪಾಳದ ಗಡಿ ಭಾಗಕ್ಕೆ ಹೋಗಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ನೇಪಾಳ ಸಶಸ್ತ್ರ ಪೊಲೀಸರು ಏಕಾಏಕಿ ಗುಂಡಿನ ದಾಳಿ ನಡೆಸಿದರು ಎನ್ನಲಾಗಿದೆ. ಸಶಸ್ತ್ರ ಸೀಮಾ ಬಲ್​ನ (ಎಸ್​ಎಸ್​ಬಿ) ಐಜಿ ಸಂಜಯ್​ಕುಮಾರ್​ ಈ ವಿಷಯವನ್ನು ಖಚಿತಪಡಿಸಿದ್ದಾರೆ.

ಗಾಯಾಳುಗಳನ್ನು ಸೀತಾಮಾರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜತೆಗೆ ಲಾಲ್​ಬಂದಿ ಗಡಿ ಹೊರಠಾಣೆ ವ್ಯಾಪ್ತಿಯಲ್ಲಿ ಗಸ್ತನ್ನು ಹೆಚ್ಚಿಸಲಾಗಿದೆ. ಸದ್ಯ ಗುಂಡಿನ ದಾಳಿ ನೇಪಾಳದ ಗಡಿಯೊಳಗೆ ನಡೆದಿದೆ. ಆದ್ದರಿಂದ, ಈ ಘಟನೆಗೆ ನಿಖರವಾದ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.

ನೇಪಾಳದ ಗಡಿಯೊಳಗೆ ಹೋಗಿದ್ದ ಭಾರತೀಯರು ನೇಪಾಳ ಸಶಸ್ತ್ರ ಪೊಲೀಸರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಯತ್ನಿಸಿದಾಗ, ತಾವು ಗುಂಡಿನ ದಾಳಿ ನಡೆಸಿದ್ದಾಗಿ ನೇಪಾಳ ಸಶಸ್ತ್ರ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.