ಶಿವಮೊಗ್ಗ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಹಲವು ಗೊಂದಲಗಳಿವೆ. ಪದವಿ ಕೋರ್ಸ್ ಇನ್ನು ಮುಂದೆ ನಾಲ್ಕು ವರ್ಷ ಎಂಬುದು ಕೇವಲ ಊಹಾಪೋಹ. ಈ ಹಿಂದಿನಂತೆಯೇ ಮೂರು ವರ್ಷಕ್ಕೆ ಪದವಿ ಪೂರೈಸಬಹುದು ಎಂದು ಹೊಯ್ಸಳ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಲಿಯಂ ಡಿಸೋಜ ತಿಳಿಸಿದರು.
ಅನುದಾನರಹಿತ ಖಾಸಗಿ ಕಾಲೇಜುಗಳ ಪ್ರಾಚಾರ್ಯರ ವೇದಿಕೆಯಿಂದ ಶನಿವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವಿ ಕೋರ್ಸ್‌ಗಳು ನಾಲ್ಕು ವರ್ಷ ಎಂಬ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ಪದವಿ ಬದಲು ಬೇರೆ ಕೋರ್ಸ್‌ಗಳತ್ತ ಮುಖ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಉಂಟಾಗಿರುವ ಗೊಂದಲಗಳು, ಸಮಸ್ಯೆಗಳ ಪರಿಹಾರಕ್ಕಾಗಿ ಅನುದಾನರಹಿತ ಖಾಸಗಿ ಕಾಲೇಜುಗಳ ಪ್ರಾಚಾರ್ಯರ ವೇದಿಕೆ ಅಸ್ತಿತ್ವಕ್ಕೆ ಬಂದಿದೆ. ಎಲ್ಲ ಕಾಲೇಜುಗಳ ಪ್ರಾಚಾರ್ಯರು ಒಗ್ಗೂಡಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿದ್ದೇವೆ ಎಂದರು.
ನಿಜಕ್ಕೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಚೆನ್ನಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳು ಹೆಚ್ಚಲಿವೆ. ಒಂದೇ ಕೋರ್ಸ್‌ನಲ್ಲಿ ಹಲವು ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಬಹುದು. ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಈ ನೀತಿ ಅನುಷ್ಠಾನಗೊಳ್ಳುತ್ತಿದೆ. ಇದೇ ಕಾರಣದಿಂದ ಒಂದಿಷ್ಟು ಗೊಂದಲಗಳು ಉಂಟಾಗಿವೆ ಎಂದು ಪ್ರೊ.ವಿಲಿಯಂ ಡಿಸೋಜ ಹೇಳಿದರು.
ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಚಾರ್ಯೆ ಡಾ.ಸಂಧ್ಯಾ ಕಾವೇರಿ, ಎಸ್‌ಆರ್‌ಎನ್‌ಎಂ ಕಾಲೇಜಿನ ಪ್ರಾಚಾರ್ಯ ಡಾ.ಅರವಿಂದ, ಅಕ್ಷರ ಕಾಲೇಜಿನ ಪ್ರಾಚಾರ್ಯ ಪ್ರೊ.ಗಿರೀಶ್, ಎಜುರೈಟ್ ಕಾಲೇಜಿನ ಡಾ.ಶಂಕರನಾರಾಯಣ್ ಸುದ್ದಿಗೋಷ್ಠಿಯಲ್ಲಿದ್ದರು.