ನ್ಯೂಸ್

Neil Armstrong Birth Anniversary: ಚಂದ್ರನ ಮೇಲೆ ಕಾಲಿಟ್ಟ ಮೊದಲನೇ ವ್ಯಕ್ತಿ ನೀಲ್ ಆರ್ಮ್‌ಸ್ಟ್ರಾಂಗ್ ನಾಸಾಗೆ ರಾಜೀನಾಮೆ ನೀಡಿದ್ದೇಕೆ?

ವಾಷಿಂಗ್ಟನ್: ನೀಲ್ ಆರ್ಮ್‌ಸ್ಟ್ರಾಂಗ್ ಅಮೆರಿಕದ ಪ್ರಸಿದ್ಧ ಗಗನಯಾತ್ರಿಯಾಗಿದ್ದು, ಮೊದಲು ಚಂದ್ರನ ಮೇಲೆ ಕಾಲಿಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಆರ್ಮ್‌ಸ್ಟ್ರಾಂಗ್ ಆಗಸ್ಟ್ 5, 1930 ರಂದು ಯುಎಸ್ಎಯ ಓಹಿಯೋದ ವಾಕಪಕೋನೆಟಾದಲ್ಲಿ ಜನಿಸಿದರು. ನೀಲ್ ಆರ್ಮ್‌ಸ್ಟ್ರಾಂಗ್ ಅವರ ಜೀವನ ಅನೇಕ ಶ್ರೇಷ್ಠ ಸಾಧನೆಗಳಿಂದಲೇ ತುಂಬಿರುವುದು ಗಮನಾರ್ಹ.

ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ
ನೀಲ್ ಆರ್ಮ್‌ಸ್ಟ್ರಾಂಗ್ ಜುಲೈ 20, 1969 ರಂದು ಅಪೊಲೊ 11 ಮಿಷನ್‌ನಲ್ಲಿ ಭಾಗವಹಿಸಿ, ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿಯಾದರು. ಇನ್ನು ಆರ್ಮ್‌ಸ್ಟ್ರಾಂಗ್ ಅವರ ಶಿಕ್ಷಣದ ಬಗ್ಗೆ ಹೇಳುವುದಾದರೆ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದ ಆರ್ಮ್‌ಸ್ಟ್ರಾಂಗ್, ನಂತರ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಪದವಿ, ಹಲವಾರು ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪದವಿಗಳನ್ನೂ ಪಡೆದಿದ್ದಾರೆ.

ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಸೇರಿದ ನೀಲ್ ಆರ್ಮ್‌ಸ್ಟ್ರಾಂಗ್
1949 ರಿಂದ 1952 ರವರೆಗೆ ನೌಕಾಪಡೆಯ ಏವಿಯೇಟರ್ ಆಗಿ ಸೇವೆ ಸಲ್ಲಿಸಿದ ನಂತರ, ನೀಲ್ ಆರ್ಮ್‌ಸ್ಟ್ರಾಂಗ್ 1955 ರಲ್ಲಿ ಏರೋನಾಟಿಕ್ಸ್ ರಾಷ್ಟ್ರೀಯ ಸಲಹಾ ಸಮಿತಿ (NACA)ಗೆ ಸೇರಿದರು. ಮುಂದಿನ 17 ವರ್ಷಗಳಲ್ಲಿ, ಅವರು NACA ಮತ್ತು ಅದರ ಉತ್ತರಾಧಿಕಾರಿ ಸಂಸ್ಥೆ, ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ನಲ್ಲಿ ಇಂಜಿನಿಯರ್, ಪರೀಕ್ಷಾ ಪೈಲಟ್ ಮತ್ತು ಗಗನಯಾತ್ರಿಯಾದರು. 1962 ರಲ್ಲಿ, ಆರ್ಮ್‌ಸ್ಟ್ರಾಂಗ್ ಗಗನಯಾತ್ರಿಗಳ ಮತ್ತೊಂದು ಗುಂಪಿನೊಂದಿಗೆ ಬಾಹ್ಯಾಕಾಶ ಕಾರ್ಯಕ್ರಮವನ್ನು ಸೇರಿಕೊಂಡರು ಮತ್ತು ಈ ಸಮಯದಲ್ಲಿ ಅವರು ಗಗನಯಾತ್ರಿಯಾಗಿ ನೋಂದಾಯಿಸಲ್ಪಟ್ಟರು.

ಜುಲೈ 16 ರಂದು ಚಂದ್ರನತ್ತ ಪಯಣ
ನೀಲ್ ಆರ್ಮ್‌ಸ್ಟ್ರಾಂಗ್ ವಿಶ್ವಾದ್ಯಂತ ಮೆಚ್ಚುಗೆ ಮತ್ತು ಗೌರವ ಗಳಿಸಿದ್ದಾರೆ. ಇವರನ್ನು ಆ ಕಾಲದ ಉನ್ನತ ವಿಜ್ಞಾನಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಜುಲೈ 16, 1969 ರಂದು ನೀಲ್ ಆರ್ಮ್‌ಸ್ಟ್ರಾಂಗ್, ಅವರ ಸಹಚರರಾದ ಎಡ್ವಿನ್ ಆಲ್ಡ್ರಿನ್ ಮತ್ತು ಮೈಕೆಲ್ ಕಾಲಿನ್ಸ್ ಅವರೊಂದಿಗೆ ಅಪೊಲೊ 11 ಚಂದ್ರನ ಕಾರ್ಯಾಚರಣೆಯಲ್ಲಿ ಚಂದ್ರನತ್ತ ಹೊರಟರು.

ನಾಸಾಗೆ ಏಕೆ ರಾಜೀನಾಮೆ ನೀಡಿದರು?
ಆರ್ಮ್‌ಸ್ಟ್ರಾಂಗ್ 1971 ರಲ್ಲಿ NASA ಗೆ ರಾಜೀನಾಮೆ ನೀಡಿದರು. ಆ ನಂತರ ಅವರು ಶೈಕ್ಷಣಿಕ ಮತ್ತು ವೃತ್ತಿಪರ ಕೆಲಸಕ್ಕೆ ಮಾತ್ರ ಸೀಮಿತರಾದರು. 1971 ರಿಂದ 1979 ರವರೆಗೆ ಅವರು ಸಿನ್ಸಿನಾಟಿ (ಓಹಿಯೋ) ವಿಶ್ವವಿದ್ಯಾಲಯದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದರು. 1979 ರ ನಂತರ, ಆರ್ಮ್‌ಸ್ಟ್ರಾಂಗ್ ಹಲವಾರು ಕಂಪನಿಗಳ ಅಧ್ಯಕ್ಷ ಅಥವಾ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು. 1982 ರಿಂದ 1992 ರವರೆಗೆ ಕಂಪ್ಯೂಟಿಂಗ್ ಟೆಕ್ನಾಲಜೀಸ್ ಫಾರ್ ಏವಿಯೇಷನ್ ​​ಮತ್ತು AIL ಸಿಸ್ಟಮ್ಸ್ ಅಧ್ಯಕ್ಷರಾಗಿದ್ದರು.

17 ದೇಶಗಳಲ್ಲಿ ಗೌರವಿಸಲಾಗಿದೆ
ಆರ್ಮ್‌ಸ್ಟ್ರಾಂಗ್ ಅವರನ್ನು 17 ದೇಶಗಳು ಗೌರವಿಸಿವೆ. ಇದರೊಂದಿಗೆ ಹಲವು ದೇಶಗಳು ವಿಶೇಷ ಗೌರವಗಳನ್ನು ನೀಡಿ ಗೌರವಿಸಿವೆ.

ಹೃದಯ ಸಂಬಂಧಿ ಕಾಯಿಲೆಯಿಂದ ನಿಧನ
25 ಆಗಸ್ಟ್ 2012 ರಂದು ತಮ್ಮ 82 ನೇ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಆರ್ಮ್‌ಸ್ಟ್ರಾಂಗ್ ನಿಧನರಾದರು. ತಮ್ಮ ಅದ್ಭುತ ಜೀವನ ಪಯಣ, ಶೌರ್ಯ ಮತ್ತು ಶಿಸ್ತಿಗೆ ಪ್ರಪಂಚದಾದ್ಯಂತ ಹೆಸರುವಾಸಿಯಾದ ಆರ್ಮ್‌ಸ್ಟ್ರಾಂಗ್ ಕೊಡುಗೆ ವಿಜ್ಞಾನ ಕ್ಷೇತ್ರದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದೆ.