ಹೊಸದಿಲ್ಲಿ: ಇಂದು ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜವಾಹರಲಾಲ್ ನೆಹರು ತಮ್ಮ ಅಮೆರಿಕನ್ ಮತ್ತು ಚೀನಾದ ಸಹವರ್ತಿಗಳಿಗೆ ಹೋಲಿಸಿದರೆ ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತಿಕೆ ಹೊಂದಿದ್ದಾರೆಂದು ಭಾವಿಸಿದ್ದರು ಎಂದು ವ್ಯಂಗ್ಯವಾಡಿದರು.
ರಾಷ್ಟ್ರಪತಿಗಳ ಭಾಷಣದ ಬಳಿಕ ಧನ್ಯವಾದ ತಿಳಿಸಿದ ಪ್ರಧಾನಿ, ಸುಮಾರು 2 ಗಂಟೆಗಳ ಕಾಲ ಮಾತನಾಡಿದರು. ಈ ವೇಳೆ ಭಾರತೀಯರು ಕಷ್ಟಗಳಿಂದ ಓಡಿಹೋಗುತ್ತಾರೆ ಎಂಬ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೇಳಿಕೆಯನ್ನು ಮುನ್ನೆಲೆಗೆ ತಂದ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
"ಭಾರತೀಯರಿಗೆ ಸಾಮಾನ್ಯವಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸವಿಲ್ಲ. ನಾವು ಯುರೋಪ್, ಜಪಾನ್, ಚೀನಾ, ರಷ್ಯಾ ಅಥವಾ ಅಮೆರಿಕ ರಾಷ್ಟ್ರದ ಜನರಂತೆ ಕೆಲಸ ಮಾಡುವುದಿಲ್ಲ ಎಂದು ಪ್ರಧಾನಿ ನೆಹರು ಅಂದು ಕೆಂಪು ಕೋಟೆಯಲ್ಲಿ ಹೇಳಿದ್ದನ್ನು ನಾನು ಈಗ ಓದಿದ್ದೇನೆ" ಎಂದರು.
"ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತರು ಎಂದು ನೆಹರು ಜೀ ಭಾವಿಸಿದ್ದರು. ಇಂದಿರಾ ಗಾಂಧಿಯವರ ಚಿಂತನೆಯೂ ನೆಹರು ಅವರ ಚಿಂತನೆಗಿಂತ ಭಿನ್ನವಾಗಿಲ್ಲ" ಎಂದು ಹೇಳಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ದಿನದಂದು ಮಾಜಿ ಪ್ರಧಾನಿ ಕೆಂಪು ಕೋಟೆಯಲ್ಲಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸುವ ಮೂಲಕ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು,(ಏಜೆನ್ಸೀಸ್).