ಸಾಗರ: ಪಟ್ಟಣದ ನೆಹರು ಮೈದಾನವನ್ನು ಲಾಭದ ಉದ್ದೇಶಕ್ಕಾಗಿ ನಗರಸಭೆಯಿಂದ ಕೊಡುವ ಪ್ರಶ್ನೆಯೇ ಇಲ್ಲ. ಕೃಷಿ ಮೇಳದ ಹೆಸರಿನಲ್ಲಿ ಖಾಸಗಿಯವರು ಅಮ್ಯೂಸ್‌ಮೆಂಟ್ ಪಾರ್ಕ್ ಹಾಕಲು ಮುಂದಾಗಿದ್ದರು. ಎಷ್ಟು ಪ್ರಭಾವ ಬೀರಿದರೂ ಅದಕ್ಕೆ ನಾನು ಅವಕಾಶ ಕೊಡಲಿಲ್ಲ ಎಂದು ಪೌರಾಯುಕ್ತ ಎಚ್.ಕೆ.ನಾಗಪ್ಪ ಹೇಳಿದರು.
ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಗರದ ನೆಹರು ಮೈದಾನದಲ್ಲಿ ಶುಕ್ರವಾರ ಸ್ವಚ್ಛತಾ ಕಾರ್ಯ ಪರಿಶೀಲಿಸಿ, ಅಮ್ಯೂಸ್‌ಮೆಂಟ್‌ಗೆ ಬಂದ ವಸ್ತುಗಳನ್ನು ತಕ್ಷಣ ತೆರವುಗೊಳಿಸುವಂತೆ ಸೂಚಿಸಿದರು.
ಸಾಗರದಲ್ಲಿ ಮಾರಿಕಾಂಬೆ ಮತ್ತು ಗಣಪತಿ ಜಾತ್ರೆ ಹೊರತುಪಡಿಸಿ ಇತರೆ ಸಂದರ್ಭಗಳಲ್ಲಿ ಮೈದಾನವನ್ನು ವಾಣಿಜ್ಯ ಉದ್ದೇಶಗಳಿಗೆ ಕೊಡುವ ಪ್ರಶ್ನೆಯೇ ಇಲ್ಲ. ಮೈದಾನಕ್ಕೆ ನೂರಾರು ಜನರು ವಾಯುವಿಹಾರಕ್ಕೆ ಬರುತ್ತಾರೆ. ಅವರಿಗೆ ತೊಂದರೆಯಾಗಲಿದೆ. ಖಾಸಗಿಯವರು ಸಹ ಯಾವ ಉದ್ದೇಶಕ್ಕೆ ಬಾಡಿಗೆ ಪಡೆದಿರುತ್ತಾರೋ ಅದೇ ಉದ್ದೇಶಕ್ಕೆ ಬಳಸಬೇಕು. ಕೃಷಿ ಮೇಳ ನಡೆಸುತ್ತೇವೆ ಎಂದು ಅಮ್ಯೂಸ್‌ಮೆಂಟ್‌ನಂತಹ ಲಾಭದಾಯಕ ಉದ್ದೇಶಕ್ಕೆ ಮೈದಾನ ಬಳಸಿದರೆ ಕ್ರಮ ನಿಶ್ಚಿತ ಎಂದರು.
ನ.1ರಂದು ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಕೆಳದಿ ರಾಣಿ ಚನ್ನಮ್ಮ ವೃತ್ತದಲ್ಲಿ ಪಾರಂಪರಿಕ ಮಾದರಿಯಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣವನ್ನು ಇದೇ ಸಂದರ್ಭ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಹೆಳಿದರು.
ದೀಪಾವಳಿ ಹಬ್ಬದ ಅಂಗವಾಗಿ ಸ್ವಚ್ಛತಾ ಕಾರ್ಯಕ್ಕೆ ಒತ್ತು ನೀಡಿದೆ. ದಸರಾ ಸಂದರ್ಭ ನಗರಸಭೆಯಿಂದ ಎಲ್ಲ ಶಕ್ತಿದೇವತೆಗಳ ದೇವಸ್ಥಾನದ ಆಸುಪಾಸು ಸ್ವಚ್ಛಗೊಳಿಸಲಾಗಿತ್ತು. ನೂತನ ಮಸೀದಿ ಉದ್ಘಾಟನೆ ಹಿನ್ನೆಲೆಯಲ್ಲಿ ಆ ಪ್ರದೇಶವನ್ನೂ ಸ್ವಚ್ಛ ಮಾಡಿಸಿದ್ದೇವೆ. ನೈರ್ಮಲ್ಯ, ಕುಡಿಯುವ ನೀರು, ಬೀದಿದೀಪ ನಿರ್ವಹಣೆಗೆ ವಿಶೇಷ ಒತ್ತು ನೀಡಿದೆ ಎಂದರು.
ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತ ಮದನ್, ನಗರಸಭೆ ಮೇಸ್ತ್ರಿ ವೇಲಾಯುಧ ಇತರರಿದ್ದರು.