ಬೆಂಗಳೂರು: ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ವಿದ್ಯಾರ್ಥಿನಿ ನೇಹಾ ಕೊಲೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಪ್ರೀತಿ ನಿರಾಕರಿಸಿದ್ದಕ್ಕಾಗಿ ನೇಹಾಳನ್ನು ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಪ್ರಕರಣ ಕುರಿತಾಗಿ ಕೊಲೆ ಆರೋಪಿ ಫಯಾಜ್ ತಾಯಿ ಮುಮ್ತಾಜ್ ಮಾತನಾಡಿ ಮಗ ಮಾಡಿದ ಕೆಲಸಕ್ಕೆ ಶಿಕ್ಷೆ ಆಗಬೇಕು ಎಂದು ಕಣ್ಣೀರು ಹಾಕಿದ್ದಾರೆ.
ಪ್ರಕರಣ ಸಂಬಂಧ ಕೊಲೆ ಆರೋಪಿ ಫಯಾಜ್ ತಾಯಿ ಮುಮ್ತಾಜ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನನ್ನ ಮಗ ಮಾಡಿರುವ ತಪ್ಪಿಗೆ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸುತ್ತೇನೆ. ಆಕೆ ಕೂಡಾ ನನ್ನ ಮಗಳಂತೆ. ನೇಹಾ ತಂದೆ-ತಾಯಿ ಬಳಿ ಕೂಡಾ ನಾನು ಕ್ಷಮೆ ಕೇಳುತ್ತೇನೆ. ಯಾವ ಮಕ್ಕಳು ಇಂತಹ ತಪ್ಪು ಮಾಡಿದ್ರೆ ತಪ್ಪು ತಪ್ಪೆ ಆಗಿರುತ್ತದೆ ಎಂದಿದ್ದಾರೆ.
ಈ ನೆಲದ ಕಾನೂನು ಏನು ಹೇಳುತ್ತದೆ, ಆ ಪ್ರಕಾರವಾಗಿ ಅವನು ಮಾಡಿದ ತಪ್ಪಿಗೆ ಶಿಕ್ಷೆಯಾಗಬೇಕು. ಅವರಿಬ್ಬರು ಪ್ರೀತಿ ಮಾಡುತ್ತಿದ್ದರು. ಈ ವಿಚಾರ ನನಗೆ ಒಂದು ವರ್ಷದ ಹಿಂದೆಯೇ ತಿಳಿದಿತ್ತು. ಬಾಡಿಬಿಲ್ಡಿಂಗ್ ಮಾಡ್ತಿದ್ದನು ಹೀಗಾಗಿ ಅವನಿಗೆ ಎಲ್ಲಡೆ ಸನ್ಮಾನ ಮಾಡುತ್ತಿದ್ದರು. ಆಗ ನೇಹಾ ಪರಿಚಯವಾಗಿದೆ. ಅಮ್ಮಾ ನಾನು ಕಾಲೇಜಿನಲ್ಲಿ ಯಾರ ಜತೆ ಮಾತನಾಡುತ್ತಿರಲಿಲ್ಲ, ಆದರೆ ಈಗ ಎಲ್ಲರೂ ನನ್ನ ಫ್ಯಾನ್ಸ್ ಆಗಿದ್ದಾರೆ. ಹುಡುಗಿಯರು ಕೂಡಾ ಮಾತನಾಡಿಸುತ್ತಾರೆ. ನೇಹಾ ಎನ್ನುವ ಹುಡುಗಿ ತುಂಬಾ ಮಾತನಾಡುತ್ತಾಳೆ ಎಂದು ಹೇಳಿದ್ದನು.
ನನ್ನ ಮಗ ಫಯಾಜ್ಗೆ ನೇಹಾ ಪ್ರಪೋಸ್ ಮಾಡಿದ್ದಳು. ನನ್ನ ಬಳಿ ಅವನು ಹೇಳಿದಾಗ ಲವ್ ಬೇಡ ಅಂತ ಹೇಳಿದ್ದೆ. ನೀನು ಚೆನ್ನಾಗಿ ಓದು ಅಂತಾ ಹೇಳಿದ್ದೇನು.ಮಗ ಕೆಎಎಸ್ ಅಧಿಕಾರಿ ಆಗಬೇಕೆಂದು ಕನಸು ಕಂಡಿದ್ದೆ. ಆದರೆ, ಈ ರೀತಿ ಆಗಿದ್ದಕ್ಕೆ ಬಹಳ ಸಂಕಟ ಆಗುತ್ತದೆ ಎಂದು ಕಣ್ಣೀರು ಹಾಕಿದ್ದಾರೆ.
ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ. ಫಯಾಜ್-ನೇಹಾ ಮದುವೆ ಆಗಬೇಕು ಅಂತ ಇದ್ದರು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದರು.