ನ್ಯೂಸ್

ಒಬಿಸಿ ಅಭಿವೃದ್ಧಿ ನಿಗಮಗಳ ನಿರ್ಲಕ್ಷ್ಯ: ಸುನಿಲ್ ಕುಮಾರ್ ಆರೋಪ | Fund release urge

ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳನ್ನು ನಿರ್ಲಕ್ಷಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಎರಡು ವರ್ಷಗಳಿಂದ ಸರಿಯಾಗಿ ಅನುದಾನ ನೀಡಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನಿಲ್ ಕುಮಾರ್ ಆರೋಪಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾ ವಿಶೇಷ ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಒಬಿಸಿ ಎಂಬುದು ಸಿದ್ದರಾಮಯ್ಯನವರಿಗೆ ಕೇವಲ ಭಾಷಣದ ವಸ್ತುವಾಗಿದೆ. ಅವರ ಅಭಿವೃದ್ಧಿ- ಕಲ್ಯಾಣದ ಬಗ್ಗೆ ಅವರಿಗೆ ಭಾವನೆಗಳಿಲ್ಲ ಎಂದು ಟೀಕಿಸಿದರು.

ಎಲ್ಲ ನಿಗಮಗಳಿಗೆ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು. ತನ್ಮೂಲಕ ಕಲ್ಯಾಣಕ್ಕೋಸ್ಕರ ಮುತುವರ್ಜಿ ವಹಿಸಬೇಕೆಂದು ಇಂದಿನ ಒಬಿಸಿ ಮೋರ್ಚಾ ಸಭೆಯಲ್ಲಿ ನಾವು ಚರ್ಚೆ ಮಾಡಿದ್ದೇವೆ ಎಂದರು.

ವರದಿ ಕೋಲ್ಡ್ ಸ್ಟೋರೇಜ್ ಗೆ

ಸ್ವತಃ ಸಿದ್ದರಾಮಯ್ಯನವರೇ ರಚಿಸಿದ ಕಾಂತರಾಜು ಆಯೋಗದ ವರದಿಯನ್ನು ತೆಗೆದುಕೊಳ್ಳಲು ಇಲ್ಲಿನವರೆಗೆ ಸಿದ್ದರಾಮಯ್ಯನವರೇ ಕಾಲಹರಣ ಮಾಡಿದ್ದಾರೆ. ಆ ವರದಿಯನ್ನು ಐಸಿಯುವಿನಲ್ಲಿ- ಕೋಲ್ಡ್ ಸ್ಟೋರೇಜ್ ನಲ್ಲಿ ಇಟ್ಟು ಸಂಪೂರ್ಣವಾಗಿ ಅದನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ.

ಜನರ ತೆರಿಗೆಯ 165 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಿದ ಆ ವರದಿಯ ಮುಖ್ಯಾಂಶಗಳನ್ನು ಚರ್ಚೆಗೆ ಬಿಡುಗಡೆ ಮಾಡಬೇಕು. ವರದಿಯಲ್ಲಿ ಏನಿದೆ ಎಂದು ಜನರಿಗೆ ಗೊತ್ತಾಗಬೇಕು ಎಂದು ಒತ್ತಾಯಿಸಿದರು.

ಜಾತಿ ಜನಗಣತಿ ಆಗಬೇಕು ಎಂದ ಅವರು, ಕೇಂದ್ರದಲ್ಲಿ ಇಲ್ಲಿನವರೆಗೆ ಅಧಿಕಾರ ಮಾಡಿದ ಕಾಂಗ್ರೆಸ್ ಪಕ್ಷವು, ಯಾವತ್ತೂ ಜಾತಿ ಗಣತಿ ಪರವಾಗಿ ಇರಲಿಲ್ಲ ಎಂದು ದೂರಿದರು. ಕೇಂದ್ರದಲ್ಲಿ ಸುದೀರ್ಘ ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಜಾತಿ ಗಣತಿ ಮಾಡಲು ಅವಕಾಶಗಳಿದ್ದವು. ಆದರೂ, ಯಾವತ್ತೂ ಇದರ ಚರ್ಚೆ ಮಾಡಿಲ್ಲ. 1931ರ ನಂತರ ಈಗ ನರೇಂದ್ರ ಮೋದಿಯವರ ಸರಕಾರ ಜಾತಿ ಗಣತಿ ಮಾಡಲು ಮುಂದಾಗಿದೆ ಎಂದರು.

75 ವರ್ಷ ಕಾಲಹರಣ ಮಾಡಿದ್ದ ಇವರು, ಕೇಂದ್ರ ಜಾತಿಗಣತಿ ಮಾಡಲು ಹೊರಟಾಗ ನಾವು ರಾಜ್ಯದಲ್ಲಿ ಮತ್ತೊಂದು ಜಾತಿಗಣತಿ ಮಾಡುತ್ತೇವೆ ಎಂದಿರುವುದು ಹಾಸ್ಯಾಸ್ಪದ. ಇದು ಗೊಂದಲ ನಿರ್ಮಿಸುತ್ತದೆ ಎಂದು ತಿಳಿಸಿದರು. ಕೇಂದ್ರದ ಜಾತಿಗಣತಿಗೆ ರಾಜ್ಯ ಸರ್ಕಾರ ಕೈ ಜೋಡಿಸಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ಜು.1 ರಿಂದ ಆ.15ರವರೆಗೆ ವಿಭಾಗ, ಜಿಲ್ಲಾವಾರು ಸಭೆ ನಡೆಸಲು ನಿರ್ಧರಿಸಲಾಯಿತು ಎಂದು ವಿ.ಸುನಿಲ್ ಕುಮಾರ್ ವಿವರಿಸಿದರು.