ನ್ಯೂಸ್

ಮಳೆ ನಷ್ಟಪೀಡಿತರ ನಿರ್ಲಕ್ಷ್ಯ: ಛಲವಾದಿ ಆಕ್ರೋಶ | Crop compensation demand

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ, ನದಿಗಳ ಪ್ರವಾಹದಿಂದ ಬಾಧಿತರದು ಅರಣ್ಯರೋದನವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜಿಲ್ಲೆಗಳ ರೈತರು, ಜನರು ತತ್ತರಿಸಿದ್ದಾರೆ. ತಕ್ಷಣ ಜಂಟಿ ಸಮೀಕ್ಷಾ ವರದಿ ತರಿಸಿಕೊಂಡು ಎಕರೆಗೆ 25 ಸಾವಿರ ರೂ. ಪರಿಹಾರ ಸರ್ಕಾರ ನೀಡಬೇಕಾಗಿತ್ತು ಎಂದರು.

ಆದರೆ ಹಿಂದುಗಳ ಅವಹೇಳನ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಕಡೆಗಣನೆ, ಸಮೀಕ್ಷೆ ಹೆಸರಿನಲ್ಲಿ ಜಾತಿ, ಉಪಜಾತಿಗಳ ವಿಭಜನೆ, ಬ್ರ್ಯಾಂಡ್ ಹೆಸರಿನಲ್ಲಿ ಬೆಂಗಳೂರು ವಿಭಜನೆಯಲ್ಲೇ ಸರ್ಕಾರದ ಆಸಕ್ತಿ ಎದ್ದು ಕಂಡಿದೆ ಎಂದು ಕುಟುಕಿದರು.

ದಲಿತರಿಗೆ ವಂಚನೆ

ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ದುರ್ಬಳಕೆ ಮುಂದುವರಿದಿದೆ. ಗ್ಯಾರಂಟಿಗಳಿಗೆ ಬಳಕೆ ಸಾಲದೆಂಬಂತೆ ಪ್ರಜಾಪ್ರಭುತ್ವ ದಿನ, ಸಂವಿಧಾನ ದಿನ, ನ್ಯಾ.ಎಚ್.ಎನ್. ನಾಗಮೋಹನದಾಸ್ ಆಯೋಗಕ್ಕೂ ಸಮಾಜ ಕಲ್ಯಾಣ ಇಲಾಖೆ ಅನುದಾನ ಬಿಡುಗಡೆಯಾಗಿದೆ ಎಂದು ಆರೋಪಿಸಿದರು.

ಪರಿಶಿಷ್ಟ ಜಾತಿಗಳಿಗೆ ಸವಲತ್ತು ಒದಗಿಸಬೇಕಾದ ಇಲಾಖೆ ಕೆಲಸದಲ್ಲೇ ಅನೇಕ ನ್ಯೂನತೆಗಳಿವೆ. ಈ ವಿಷಯದತ್ತ ಗಮನಸೆಳೆದರೆ ಸಿಎಂ ಸಿದ್ದರಾಮಯ್ಯ ತಮಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಬಹುತೇಕ ಇಲಾಖೆಗಳು ಪ್ರೈವೇಟ್ ಲಿಮಿಟೆಡ್ ರೀತಿಯಲ್ಲಿ ತಮ್ಮ ಮೂಗಿನ ನೇರಕ್ಕೆ ಕೆಲಸ ಮಾಡುತ್ತಿವೆ ಎಂದು ದೂರಿದರು.

ಕರ್ನಾಟಕ ಲೋಕಸೇವಾ ಆಯೋಗವನ್ನು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಬಿಡದೆ ಪ್ರಭಾವಬೀರಿ, ಒತ್ತಡ ಹೇರಿ ಕೆಲಸ ಮಾಡಿಕೊಂಡಿದ್ದಾರೆ. ಇದೀಗ ಹೊರ ಬಂದ ಹುಳುಕುಗಳನ್ನೆಲ್ಲ ಕೆಪಿಎಸ್‌ಸಿ ಮೇಲೆ ಹಾಕುತ್ತಿದ್ದಾರೆ. ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಯಾದ ಕೆಪಿಎಸ್‌ಸಿಯನ್ನೇ ಮುಚ್ಚುತ್ತೇವೆ ಎಂದು ಸಚಿವರು ಹೇಳಿಕೆ ನೀಡುತ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಖಜಾನೆ ಖಾಲಿ

ಅಭಿವೃದ್ಧಿ ಕೆಲಸಗಳು ನಿಂತು ಹೋಗಿರುವುದರಿಂದ ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ಏನೇನೋ ಕಸರತ್ತು ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಗುಂಡಿಗಳಲ್ಲೇ ರಸ್ತೆಗಳಿರುವ ಕಡೆಗೆ ಜನರು ಮಾತ್ರವಲ್ಲ ಕಂಪನಿಗಳು ಗಮನಸೆಳೆದ ಕಾರಣ ವಿಚಲಿತರಾಗಿದ್ದಾರೆ ಎಂದು ಛೇಡಿಸಿದರು.

ಖಜಾನೆ ಖಾಲಿಯಾಗಿರುವ ಕಾರಣ ಸಂಚಾರ ಸಿಕ್ಕು ಇತ್ಯರ್ಥ, ರಸ್ತೆ ಗುಂಡಿಗಳನ್ನು ಮುಚ್ಚಲು ಸಿಎಂ, ಡಿಸಿಎಂ ಭಿಕ್ಷೆ ಬೇಡುತ್ತಿದ್ದಾರೆ. ಸರ್ಕಾರದ ಗಮನಸೆಳೆಯಲು ಬಿಜೆಪಿ ಗುಂಡಿ ಮುಚ್ಚಿ ಹೋರಾಟ ನಡೆಸಿದ್ದನ್ನೇ ಗೇಲಿ ಮಾಡುವಂತಹ ದಾಷ್ಟ್ಯತನ ಪ್ರದರ್ಶಿಸಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಬುರುಡೆಯೂ ಖಾಲಿ

ಸರ್ಕಾರದ ಖಜಾನೆ ಮಾತ್ರ ಖಾಲಿಯಾಗಿದೆ ಎಂದುಕೊಂಡಿದ್ದೆವು. ಧರ್ಮಸ್ಥಳ ಪ್ರಕರಣದ ಬುರುಡೆ ಗ್ಯಾಂಗ್ ಸರ್ಕಾರದ ಬುರುಡೆಯೂ ಖಾಲಿಯಾಗಿರುವುದನ್ನು ಬಯಲುಗೊಳಿಸಿದೆ ಎಂದು ವ್ಯಂಗ್ಯವಾಡಿದರು.

ಬುರುಡೆ ಮುಂದಿಟ್ಟುಕೊಂಡು ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಇಂತಹ ಪಿಐಎಲ್‌ನಲ್ಲಿ ಸಾಮಾನ್ಯವಾಗಿ ಸರ್ಕಾರವನ್ನೇ ಪ್ರತಿವಾದಿಯನ್ನಾಗಿ ಮಾಡಲಾಗಿರುತ್ತದೆ.

ಆದರೆ ಪಿಐಎಲ್ ವಜಾ ಮಾಡಿರುವುದು ಗೊತ್ತೇ ಇಲ್ಲವೆಂದು ಸಚಿವರೊಬ್ಬರು ಹೇಳುತ್ತಾರೆ. ಇದಕ್ಕೆ ಸರ್ಕಾರದ ಬುರುಡೆ ಖಾಲಿಯಾಗಿದೆ ಎನ್ನದಿದ್ದರೆ ಇನ್ನೇನು ಹೇಳಬೇಕು ? ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.