ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ(NEET) ತಯಾರಿ ನಡೆಸುತ್ತಿದ್ದ 21 ವರ್ಷದ ವಿದ್ಯಾರ್ಥಿಯೊಬ್ಬ ಶುಕ್ರವಾರ(ನ. 07) ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ(Student Suicide) ಎಂದು ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಮೊಹಮ್ಮದ್ ಎಂದು ಗುರುತಿಸಲಾಗಿದೆ. ರಾಂಪುರದ ನಿವಾಸಿ. ನಾಲ್ಕು ದಿನಗಳ ಹಿಂದೆ ಪರೀಕ್ಷೆಯ ಸಿದ್ದತೆಗಾಗಿ ರಾವತ್ಪುರದ ಹಾಸ್ಟೆಲ್ಗೆ ಬಂದು ತಂಗಿದ್ದನು ಎನ್ನಲಾಗಿದೆ. ಹಾಸ್ಟೆಲ್ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಮೊಹಮ್ಮದ್ ರೂಮ್ಮೇಟ್ ಆಗಿದ್ದ ಇಮ್ದಾದ್ ಹಸನ್ ಶುಕ್ರವಾರ ಪ್ರಾರ್ಥನೆಗೆ ಕರೆದಿದ್ದಾರೆ. ಆದರೆ ಮೊಹಮ್ಮದ್ ಹೋಗಿಲ್ಲ. ಇಮ್ದಾದ್ ಪ್ರಾರ್ಥನೆ ಮುಗಿಸಿಕೊಂಡು ವಾಪಸ್ ಬಂದಾಗ ಕೋಣೆಯ ಒಳಗಿನಿಂದ ಲಾಕ್ ಆಗಿದ್ದು, ಕರೆ ಮಾಡಿದ್ದಾರೆ. ಆಗ ಮೊಬೈಲ್ ರಿಸೀವ್ ಮಾಡದ ಕಾರಣ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ: ಸೈಬರ್ ವಂಚನೆ: 55 ಲಕ್ಷ ರೂ. ಹಣ ಕಳೆದುಕೊಂಡಿರುವ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ| Kalyan Banerjee
ಪೊಲೀಸರು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ಒಳಗೆ ಹೋದಾಗ ಮೊಹಮ್ಮದ್ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಪಕ್ಕದಲ್ಲೆ ಆತನು ಬರೆದ ಡೆತ್ನೋಟ್ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿದ್ಯಾರ್ಥಿಯ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಡೆತ್ನೋಟ್ನಲ್ಲಿ, ಅಮ್ಮ ಮತ್ತು ಅಪ್ಪ, ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ತುಂಬಾ ಒತ್ತಡದಲ್ಲಿದ್ದೇನೆ, ನಿಮ್ಮ ಕನಸುಗಳನ್ನು ನನಸಾಗಿಸಲು ನನಗೆ ಸಾಧ್ಯವಾಗುವುದಿಲ್ಲ. ನಾನು ನನ್ನ ಪ್ರಾಣವನ್ನೇ ತೆಗೆದುಕೊಳ್ಳುತ್ತಿದ್ದೇನೆ. ಇದಕ್ಕೆ ನಾನೇ ಹೊಣೆ ಎಂದು ಬರೆದಿದ್ದಾನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)