ನ್ಯೂಸ್

ನೀಟ್​ ಪರೀಕ್ಷೆ ಅಕ್ರಮ: ಸೋರಿಕೆಯಾದ ಪ್ರಶ್ನೆಪತ್ರಿಕೆಗಳಿಗೆ ಅಭ್ಯರ್ಥಿ ಕೊಟ್ಟ ಹಣವೆಷ್ಟು ಗೊತ್ತೇ? ಇಲ್ಲಿದೆ ವರದಿ

ಪಾಟ್ನಾ: ದೇಶದ ಅತಿದೊಡ್ಡ ಮತ್ತು ಎರಡನೇ ಅತ್ಯಂತ ಕಷ್ಟಕರ ಪರೀಕ್ಷೆಯಾದ ನೀಟ್ ಯುಜಿ ಕುರಿತಾದ ವಿವಾದಗಳು ಅಂತ್ಯ ಕಾಣುವಂತೆ ತೋರುತ್ತಿಲ್ಲ. ಕಳೆದ ತಿಂಗಳ ನೀಟ್ ಪರೀಕ್ಷೆಗೂ ಮುನ್ನ ಸೋರಿಕೆಯಾದ ಪ್ರಶ್ನೆಪತ್ರಿಕೆಗಳಿಗೆ ಪ್ರತಿ ಅಭ್ಯರ್ಥಿಯಿಂದ ಸುಮಾರು 30ರಿಂದ 32 ಲಕ್ಷ ರೂ.ಗೆ ಬೇಡಿಕೆಯಿಟ್ಟ ಮಾಫಿಯಾಗಳಿಗೆ ನೀಡಲಾಗಿದ್ದ ಆರು ಪೋಸ್ಟ್-ಡೇಟೆಡ್ ಚೆಕ್‌ಗಳನ್ನು ಇದೀಗ ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ (ಇಒಯು) ವಶಪಡಿಸಿಕೊಂಡಿದೆ ಎಂದು ಎಬಿಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನೀಟ್​-ಯುಜಿ 2024 ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ EOU ಇದುವರೆಗೆ ನಾಲ್ವರು ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ 13 ಜನರನ್ನು ಬಂಧಿಸಿದೆ. ಎಲ್ಲಾ ಆರೋಪಿಗಳು ಬಿಹಾರ ಮೂಲದವರಾಗಿದ್ದಾರೆ ಎಂದು ಡಿಐಜಿ ಮಾಹಿತಿ ಹಂಚಿಕೊಂಡಿದ್ದಾರೆ.

ಒಂಬತ್ತು ಅಭ್ಯರ್ಥಿಗಳಿಗೆ (ಬಿಹಾರದಿಂದ ಏಳು ಮತ್ತು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ತಲಾ ಒಬ್ಬರು) ತನಿಖೆಗೆ ಹಾಜರಾಗಲು ಈಗಾಗಲೇ ಇಓಯು ನೋಟಿಸ್ ರವಾನಿಸಿದೆ ಎಂದು ಡಿಐಜಿ ತಿಳಿಸಿದ್ದಾರೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ನಡೆಸಿದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET-UG) 2024, 571 ನಗರಗಳಲ್ಲಿ 4,750 ಕೇಂದ್ರಗಳಲ್ಲಿ 24 ಲಕ್ಷ ಅಭ್ಯರ್ಥಿಗಳಿಗೆ ನಡೆಯಿತು.

ಈ ವೇಳೆ ಜೂನ್ 4ರಂದು ಫಲಿತಾಂಶಗಳನ್ನು ಕೂಡ ಪ್ರಕಟಿಸಲಾಯಿತು. ರಿಸಲ್ಟ್​ನಲ್ಲಿ ಅನೇಕ ವ್ಯತ್ಯಾಸಗಳನ್ನು ಪತ್ತೆಹಚ್ಚಿದ ವಿದ್ಯಾರ್ಥಿಗಳು, ಈ ವಿಷಯವನ್ನು ಗಂಭೀರವಾಗಿ ಆರೋಪಿಸಿ, ಆಕ್ರೋಶ ಹೊರಹಾಕಿದರು. ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷೆಯ ಸಮಗ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾರಣ ಹೊಸ ಪರೀಕ್ಷೆಗೆ ಒತ್ತಾಯಿಸಿ ಅಭ್ಯರ್ಥಿಗಳ ಗುಂಪು ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).